

ಮುಂಡರಗಿ: ಮಲೆನಾಡಿನ ವಿವಿಧೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಡಲಾಗುತ್ತಿದ್ದು, ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಮಂಗಳವಾರ ತಾಲೂಕಿನ ಹಮ್ಮಿಗಿ ಬಳಿಯ ಸಿಂಗಟಾಲೂರ ಬ್ಯಾರೇಜ್ನ 26 ಗೇಟ್ಗಳ ಪೈಕಿ 22 ಗೇಟ್ಗಳ ಮೂಲಕ 1,07,570 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.
ಬ್ಯಾರೇಜ್ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿನ್ನೀರಿಗೆ ಗುಮ್ಮಗೋಳ, ಬಿದರಳ್ಳಿ, ವಿಠಲಾಪೂರ ಹಾಗೂ ಹೂವಿನಹಡಗಲಿ ತಾಲೂಕಿನ ಅಲ್ಲಿಪೂರ ಗ್ರಾಮಗಳು ಮುಳುಗಡೆ ಪ್ರದೇಶಕ್ಕೆ ಒಳಪಟ್ಟಿವೆ. ಆದರೆ, ಇದುವರೆಗೆ ನಾಲ್ಕು ಗ್ರಾಮಗಳು ಸ್ಥಳಾಂತರಗೊಳ್ಳದ ಕಾರಣ ಬ್ಯಾರೇಜ್ನಲ್ಲಿ 1.98 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ.
ಬ್ಯಾರೇಜ್ಗೆ 1.50 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಹರಿದು ಬಂದರೆ ಮುಳುಗಡೆ ಪ್ರದೇಶಕ್ಕೆ ಒಳಪಡುವ ಗ್ರಾಮಗಳಿಗೆ ಪ್ರವಾಹ ಸಮಸ್ಯೆ ಎದುರಾಗಲಿದೆ. ಹಾಗೆಯೇ ತುಂಗಭದ್ರಾ ನದಿ ಭಾಗದ ಬಹುತೇಕ ಜಮೀನುಗಳು ಜಲಾವೃತವಾಗಲಿವೆ. ಕಳೆದ ಎರಡು ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ 1.50 ಲಕ್ಷದಿಂದ 2.50 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಾಗ ಬ್ಯಾರೇಜ್ನ 26 ಗೇಟ್ಗಳನ್ನು ಸಂಪೂರ್ಣವಾಗಿ ತೆರೆದಾಗಲೂ ಪ್ರವಾಹ ಎದುರಾಗಿತ್ತು.
ಪ್ರಸಕ್ತ ವರ್ಷದ ಆಗಸ್ಟ್ನಲ್ಲಿ ನದಿಗೆ 1,05,167 ಕ್ಯೂಸೆಕ್ವರೆಗೆ ನೀರು ಹರಿದು ಬಂದಿತ್ತು. ಎರಡು-ಮೂರು ದಿನದೊಳಗೆ ಹರಿವಿನ ಪ್ರಮಾಣ ಇಳಿಮುಖವಾಗಿತ್ತು. ಇದರಿಂದ ಪ್ರವಾಹ ಭೀತಿಯಲ್ಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಮತ್ತೆ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದು ನದಿ ಭಾಗದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.