

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಕಟ್ಟೆಕ್ಯಾತನಹಳ್ಳಿ ಬಳಿ ಗಣೇಶ ಹಬ್ಬದಂದು ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
ಹೊಸಮಾವಿನಕೆರೆ ಗ್ರಾಮದ ಬಲರಾಮಯ್ಯ ಅವರ ಪತ್ನಿ ಜಯಮ್ಮ(60) ಆತ್ಮಹತ್ಯೆ ಮಾಡಿಕೊಂಡವರು. ಜಯಮ್ಮ ಅವರ ಮಗಳನ್ನು ಪಾಂಡವಪುರಕ್ಕೆ ವಿವಾಹ ಮಾಡಿಕೊಡಲಾಗಿದ್ದು, ಮಗಳಿಗೆ ಬಾಗಿನ ಕೊಡಲು ಮಂಗಳವಾರ ಪಾಂಡವಪುರಕ್ಕೆ ತೆರಳಿದ್ದರು. ಮಗಳ ಮನೆಗೆ ಹೋಗುವ ಮಾರ್ಗಮಧ್ಯೆ ತನ್ನ ಕತ್ತಿನಲ್ಲಿದ್ದ ಚಿನ್ನದ ಸರ ಕಳವಾಗಿದ್ದನ್ನು ಗಮನಿಸಿ ಮನೆಯವರಿಗೆ ಏನು ಹೇಳಲಿ ಎಂಬ ಭಯದಿಂದ ಮಗಳ ಮನೆಗೆ ಹೋಗಿ ಬಾಗಿನ ನೀಡದೆ, ಹಿಂದಿರುಗಿ ಗ್ರಾಮ ಸಮೀಪದ ಹೊಳೆಯ ಸೇತುವೆ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಮ್ಮ ಅವರ ಬ್ಯಾಗಿನಲ್ಲಿ ಬಾಗಿನದ ಸಾಮಗ್ರಿಗಳು ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಈಜುಗಾರರು ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನಿರಂಜನ್, ಪಿಎಸ್‌ಐ ಪ್ರಮೋದ್ ಭೇಟಿ ನೀಡಿ ಶವದ ಹುಡುಕಾಟ ಮುಂದುವರಿಸಿದ್ದಾರೆ.