ನದಿಗೆ ಶೌಚ ತ್ಯಾಜ್ಯ ಸುರಿಯುತ್ತಿದ್ದ ನಾಲ್ವರು ವಶಕ್ಕೆ

ಟ್ಯಾಂಕರ್ ವಶ
07Kush02
Published on

ಕುಶಾಲನಗರ: ಶೌಚ ತ್ಯಾಜ್ಯವನ್ನು ಟ್ಯಾಂಕರ್‌ನಲ್ಲಿ ತುಂಬಿಸಿ ನದಿಗೆ ಹರಿಸುತ್ತಿದ್ದ ನಾಲ್ವರನ್ನು ಮಂಗಳವರ ರಾತ್ರಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ವಾಣಿಜ್ಯ ಕಟ್ಟಡಗಳಿಂದ ಶೌಚ ತ್ಯಾಜ್ಯವನ್ನು ತೆರವುಗೊಳಿಸಿ ಟ್ಯಾಂಕರ್‌ಗೆ ತುಂಬಿಸಿ ನಂತರ ಅದನ್ನು ದಂಡಿನಪೇಟೆ ಸಮೀಪದ ಶಾಂತಿ ಮಾರ್ಗ ಬಳಿ ಚರಂಡಿ ಮೂಲಕ ನದಿಗೆ ಹರಿಸುತ್ತಿದ್ದದ್ದನ್ನು ಪ್ರತ್ಯಕ್ಷವಾಗಿ ಕಂಡ ಸ್ಥಳೀಯ ನಿವಾಸಿ ಅಜೀಜ್ ಎಂಬುವರು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ದಾಳಿ ನಡೆಸಿ ಟ್ಯಾಂಕರ್ ವಶಪಡಿಸಿಕೊಂಡು ಟ್ಯಾಂಕರ್ ಮಾಲೀಕರಾದ ಹರೀಶ್, ಚಾಲಕ ರವಿ, ಉದಯ ಮತ್ತು ಕುಶಾಲನಗರ ಪುರಸಭೆ ಕಾರ್ಮಿಕನೊಬ್ಬನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಮಂಡ್ಯ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಸೇರಿದ ಟ್ಯಾಂಕರ್‌ಅನ್ನು ಬಾಡಿಗೆ ಮೇರೆಗೆ ಕುಶಾಲನಗರದ ಕಾರ್ಮಿಕ ತಂದು ಕುಶಾಲನಗರ ಪಟ್ಟಣದ ವಾಣಿಜ್ಯ ಕಟ್ಟಡಗಳಿಂದ ಶೌಚ ತ್ಯಾಜ್ಯ ತೆರವುಗೊಳಿಸಿ ಟ್ಯಾಂಕರ್‌ನಲ್ಲಿ ತುಂಬಿಸಿ ನಂತರ ಪಟ್ಟಣ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ದಂಡಿನಪೇಟೆ ಸಮೀಪ ನದಿಗೆ ಸುರಿಯುತ್ತಿದ್ದದ್ದನ್ನು ಅಜೀಜ್ ಗಮನಿಸಿದ್ದಾರೆ.

ಈ ವಿಷಯವನ್ನು ಪುರಸಭೆ ಸದಸ್ಯ ಸುರಯ್ಯಬಾನು ಅವರ ಗಮನಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ದಾಳಿ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಠಾಣೆ ಎಸ್‌ಐ ಚಂದ್ರಶೇಖರ್ ಮತ್ತು ಸಿಬ್ಬಂದಿ, ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ರಮಕ್ಕೆ ಒತ್ತಾಯ: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ನದಿಗೆ ಶೌಚ ತ್ಯಾಜ್ಯ ಸುರಿಯುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಂಡಿನಪೇಟೆ ಪ್ರಮುಖರಾದ ಶಬೀರ್ ಅಹಮದ್ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ನದಿಗೆ ಶೌಚ ತ್ಯಾಜ್ಯ ಸುರಿಯುತ್ತಿದ್ದ ಸ್ಥಳಕ್ಕೆ ಕುಶಾಲನಗರ ಎಸ್‌ಐ ಚಂದ್ರಶೇಖರ್ ಮತ್ತು ಪುರಸಭೆ ಆರೋಗ್ಯಾಧಿಕಾರಿ ಉದಯಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net