

ಶೃಂಗೇರಿ: ವಿಶ್ವದಲ್ಲಿ ಎಲ್ಲ ಕಡೆ ನೀರಿನ ಸಮಸ್ಯೆ ಇದೆ. ಪ್ರಕೃತಿಯಲ್ಲಿ ಭೂಮಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಲ್ಲಿರುವ ನದಿಗಳು ಪಾರಂಪರಿಕ ಮೌಲ್ಯಗಳನ್ನು ಹೊಂದಿದ್ದು, ಅದನ್ನು ಜತನದಿಂದ ಕಾಪಾಡುವ ಜವಾಬ್ದಾರಿ ಸರ್ವರ ಮೇಲಿದೆ ಎಂದು ಪದ್ಮಶ್ರೀ ಪುರಸ್ಕೃತ ಉಮಾಶಂಕರ್ ಪಾಂಡೆ ಅಭಿಪ್ರಾಯಪಟ್ಟರು.
ಪಟ್ಟಣದ ಗೌರೀಶಂಕರ್ ಸಭಾಂಗಣದಲ್ಲಿ ಬುಧವಾರ ನವದೆಹಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಶಿವಮೊಗ್ಗ ಪರ್ಯಾವರಣ ಟ್ರಸ್ಟ್ ಸಹಯೋಗದೊಂದಿಗೆ ನಿರ್ಮಲ ತುಂಗಾಭದ್ರಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನದಿಗಳು ಉಳಿದರೆ ಮನುಷ್ಯನ ಬದುಕು ಸಮೃದ್ಧವಾಗಿರುತ್ತದೆ. ನದಿಗಳು ನಶಿಸಿದರೆ ನಾವು ನಾಶವಾಗುತ್ತೇವೆ. ಮಕ್ಕಳು ದೇಶದ ಭವಿಷ್ಯತ್ತಿನ ರೂವಾರಿಗಳು. ನದಿಗಳಿಗೆ ಜಾತಿ, ಧರ್ಮವಿಲ್ಲ. ಅದು ಸರ್ವರ ಜೀವನಾಡಿ. ನದಿಗಳ ಅಳಿವಿನಿಂದ ಭಾರತೀಯ ಸಂಸ್ಕೃತಿಗೆ ನಷ್ಟವಾಗುತ್ತದೆ ಎಂದರು.
ಬಾಟಲ್ ನೀರು ಕುಡಿಯುವ ಸ್ಥಿತಿ ಎದುರಾಗಿದೆ. ಮಕ್ಕಳು ನದಿಗಳ ಪಾವಿತ್ರೃದ ಕುರಿತು ಚಿಂತನೆ ಮಾಡಬೇಕಿದೆ. ಮಕ್ಕಳಲ್ಲಿ ಶಿವಾಜಿಯ ಕ್ಷಾತ್ರ ತೇಜಸ್ಸು ಇದೆ. ಮೀರಾಬಾಯಿಯ ಆಧ್ಯಾತ್ಮಿಕ ತುಡಿತವಿದೆ. ಭಗತ್ ಸಿಂಗ್, ಮಂಗಲಪಾಂಡೆ, ಚಂದ್ರಶೇಖರ್ ಆಜಾದ್ ಅವರು ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ್ದರು. ಹಾಗಾಗಿ ನಮ್ಮ ಮಕ್ಕಳು ನೀರಿನ ಸಂರಕ್ಷಣೆಗಾಗಿ ಹೆಚ್ಚಿನ ಕಾಳಜಿ ವಹಿಸಬೇಕು. ಗಂಗಾನದಿ ನಮ್ಮ ದೇಶದ ಅಸ್ಮಿತೆ. ಅದು ಸನಾತನ ಧರ್ಮದ ಪ್ರತೀಕ. ಅದರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ಹೇಳಿದರು.
ನಮ್ಮಲ್ಲಿ ಶೇ.4 ನೀರು ಇದ್ದು ಅದರಲ್ಲಿ ನಮಗೆ ಶುದ್ಧ ನೀರು ಸಿಗುವುದು ಶೇ.1 ಮಾತ್ರ. ಒಂದು ನಿಂಬೆ ಹಣ್ಣು ಬೆಳೆಯಲು 100 ಲೀಟರ್, ತೊಗರಿಬೇಳೆ ಬೇಯಿಸಲು ಎರಡು ಲೀಟರ್ ನೀರು ಬೇಕು. ನಾವು ದಿನನಿತ್ಯ ನಾಲ್ಕು ಲೀಟರ್ ನೀರು ಕುಡಿಯಬೇಕಿದ್ದು ನೀರನ್ನು ಅತಿಯಾಗಿ ಸಂರಕ್ಷಿಸುವ ಅಗತ್ಯವಿದೆ. ಹಾಗಾಗಿ ಜನರು ಜೀವವಿಮೆ ಮಾಡಿಸುವ ಬದಲು ನೀರನ್ನು ಸಂರಕ್ಷಿಸಿ ಜಲವಿಮೆ ಮಾಡುವ ಅವಶ್ಯಕತೆ ಇದೆ ಎಂದರು.
ಶೃಂಗೇರಿ ಪವಿತ್ರ ಭೂಮಿ. ಶ್ರೀ ಆದಿಶಂಕರರು ಸನಾತನ ಧರ್ಮದ ಶ್ರೇಯಸ್ಸಿಗಾಗಿ ಶೃಂಗೇರಿ ಪೀಠ ಸ್ಥಾಪನೆ ಮಾಡಿದ್ದು, ಇಲ್ಲಿ ಹರಿಯುವ ತುಂಗೆ ಅತ್ಯಂತ ಪವಿತ್ರ. ಅದನ್ನು ಮಲಿನಗೊಳಿಸದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಾಗೂ ನಾಗರಿಕರ ಮೇಲಿದೆ. ಅಭಿಯಾನ ರಾಜಕೀಯ ಮೀರಿದ ಕಾರ್ಯಕ್ರಮ. ಮೊದಲ ಹಂತದ ಕಾರ್ಯಕ್ರಮ ನ.14ಕ್ಕೆ ಹರಿಹರದಲ್ಲಿ ಮುಕ್ತಾಯವಾಗಲಿದೆ. ಬಳಿಕ ಕೊಂಚ ಸಮಯದ ಬಳಿಕ ಕಿಷ್ಕಿಂದೆ ತನಕ ನಡೆಯಲಿದೆ ಎಂದು ತಿಳಿಸಿದರು.
ಸುಮಾರು ಒಂಬತ್ತು ಕಿ.ಮೀ ದೂರದ ಅಡ್ಡಗದ್ದೆ ತನಕ ಸಾಗಿ ಬಂದ ಅಭಿಯಾನ ಸ್ವಲ್ಪ ವಿರಾಮದ ಬಳಿಕ ಹರಿಹರಪುರ ತಲುಪಿತು.
ಶಿವನ ಕಮಂಡಲದಲ್ಲಿ ಪವಿತ್ರವಾದ ಜಲವಿದೆ. ಶ್ರೀರಾಮ ಜನಿಸಿದ ಸ್ಥಳದಲ್ಲಿ ಸರಯೂ ನದಿಯಿದೆ. ಶ್ರೀಕೃಷ್ಣನ ಜನ್ಮಸ್ಥಾನದಲ್ಲಿ ಕಾಳಿ ನದಿ ಇದ್ದು, ಭಗವಾನ್ ಶ್ರೀನಾರಾಯಣ ನೀರಿನ ಜತೆ ಇದ್ದಾರೆ. ಸೃಷ್ಟಿಯಲ್ಲಿ ತಾಯಿಗೆ ಪ್ರಮುಖ ಸ್ಥಾನ. ಆಕೆ ಮಕ್ಕಳ ಹಸಿವು ನೀಗಿಸುವ ಮಹಾತಾಯಿ. ನದಿಗಳು ಕೂಡಾ ಮಾತೃಸ್ವರೂಪ. ನಮ್ಮ ಬದುಕಿಗೆ ಅತ್ಯಮೂಲ್ಯವಾದ ನೀರನ್ನು ನೀಡಿ ನಮ್ಮ ದಾಹ ನೀಗಿಸುವ ನದಿಗಳ ಶುದ್ಧೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಜಗತ್ತಿನಲ್ಲಿ ಗುರು, ತಂದೆ, ತಾಯಿ ಹಾಗೂ ಸ್ವಚ್ಛಮನಸ್ಸಿನ ಮಿತ್ರರ ಋಣ ತೀರಿಸುವುದು ಅಸಾಧ್ಯ. ತಾಯಿಯ ಕಣ್ಣಲ್ಲಿ ನೀರು ಬಂದರೆ ನಮಗೆ ಶ್ರೇಯಸ್ಸು ಉಂಟಾಗುವುದಿಲ್ಲ. ನದಿಗಳನ್ನು ಮಾತೃಸ್ವರೂಪದಿಂದ ನಾವು ನೋಡಬೇಕು. ಮುಂದಿನ ಯುವಪೀಳಿಗೆಗೆ ನಾವು ಬಿಟ್ಟು ಹೋಗುವ ಅಮೂಲ್ಯ ಆಸ್ತಿ ಶುದ್ಧ ಜಲ ಮಾತಾ. ಅವರು ನೀರನ್ನು ವ್ಯಾಪಾರ ಮಾಡುವ ಪ್ರವೃತ್ತಿ ನಿಲ್ಲಿಸಬೇಕಿದೆ ಎಂದು ಉಮಾಶಂಕರ್ ಪಾಂಡೆ ಹೇಳಿದರು. ಡಿ.ಎನ್.ಜೀವರಾಜ್, ಬಸವರಾಜ್ ಪಾಟೀಲ್, ಬಿ.ಎಂ.ಕುಮಾರಸ್ವಾಮಿ ಇತರರಿದ್ದರು.