ನದಿಗಳ ಮಾಲಿನ್ಯ ಮನುಕುಲದ ಅಧಃಪತನದ ಸಂಕೇತ:ನಿರ್ಮಲಾಗೌಡ

ನದಿಗಳ ಮಾಲಿನ್ಯ ಮನುಕುಲದ ಅಧಃಪತನದ ಸಂಕೇತ:ನಿರ್ಮಲಾಗೌಡ
Published on

ಹಾಸನ: ನದಿಗಳ ಮಾಲಿನ್ಯಗೊಂಡರೆ ಅದು ಮಾನವ ಕುಲದ ಅಧಃಪತನದ ಸಂಕೇತ. ನದಿ ನೀರಿನ ಕಲುಷಿಷತೆ ಮನುಷ್ಯರ ಮನಸ್ಸಿನ ಕಲ್ಮಶವನ್ನು ತೋರಿಸುತ್ತಿದೆ ಎಂದು ಪರಿಸರ ತಜ್ಞೆ ಹಾಗೂ ನದಿ ನೀರಿನ ಉಳಿವಿನ ಹೋರಾಟಗಾರ್ತಿ ನಿರ್ಮಲಾಗೌಡ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಸಿರು ಭೂಮಿ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಭಾರತ ಜ್ಞಾನ ವಿಜ್ಞಾನ ಸಮಿತಿ, ಪರಿಸರಕ್ಕಾಗಿ ನಾವು ಬಳಗ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರೆಡ್ ಕ್ರಾಸ್, ಭೂ ಸಿರಿ ವೇದಿಕೆ ಹಾಗೂ ಹಾಸನ ಜಿಲ್ಲಾ ಹಿರಿಯ ನಾಗರಿಕ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ‘ನದಿಗಳನ್ನು ಕೊಲ್ಲಬೇಕೆ?’ ಎಂಬ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿರುವ ಎಲ್ಲಾ ನದಿಗಳು ಮಲಿನಗೊಳ್ಳುತ್ತಿವೆ ಎಂಬ ಗಂಭೀರ ವಿಷಯವನ್ನು ಪ್ರಸ್ತಾಪಿಸಿದರು.
ಹಾಸನ ಸಮೀಪದ ಹಾಲವಾಗಿಲಿನಲ್ಲಿ ಯಗಚಿ ನದಿಗೆ ಹಾಸನದ ಕೊಳೆಚೆ ನೀರು ಸೇರ್ಪಡೆಗೊಳ್ಳುತ್ತಿದೆ. ಇದೇ ರೀತಿ ಯಗಚಿ ನದಿಗೆ ಹಾಸನದ ತ್ಯಾಜ್ಯನೀರು ಹಾಗೂ ಕೈಗಾರಿಕಾ ತ್ಯಾಜ್ಯದ ನೀರನ್ನು ಹರಿಸುವುದನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಯಗಚಿ ನದಿಯು ಬೆಂಗಳೂರಿನ ಕೆಂಗೇರಿ ಮೋರಿಯಂತಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಲವು ಶಾಲಾ-ಕಾಲೇಜು ಮಕ್ಕಳಿಗೆ ‘ನಿಜವಾಗಿಯೂ ನಿಮಗೆ ಏನು ಇಷ್ಟವಾಗುತ್ತದೆ’ ಎಂದು ಪ್ರಶ್ನೆಯನ್ನು ಕೇಳಿದರು. ನಂತರ ಸುಂದರ ಪರಿಸರದ ಚಿತ್ರಣವನ್ನು ತೋರಿಸಿ ಎಲ್ಲರಿಗೂ ಸುಂದರ ಪರಿಸರ ಎಂದರೆ ಇಷ್ಟ. ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಮಗೆ ಇಷ್ಟವಾಗುವುದನ್ನು ನಾವೇ ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ಸೂಚ್ಯವಾಗಿ ನೀಡಿದರು.
ಎತ್ತಿನಹೊಳೆ ಯೋಜನೆಯಿಂದಾಗಿಯೂ ನದಿ ಮೂಲ ಹಾಗೂ ಪರಿಸರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಮಸ್ಯೆಗಳ ಬಗ್ಗೆ ನಾವು ಎದ್ದು ನಿಂತು ಮಾತನಾಡಿದಾಗ ಮಾತ್ರ ಸಮಸ್ಯೆಗೆ ಪರಿಹಾರದ ದಾರಿಯನ್ನು ಕಂಡುಕೊಳ್ಳಲು ಸಾಧ್ಯ. ನದಿ ನೀರು ಕಲುಷಿತಗೊಳ್ಳಲು ಮೂಲ ಕಾರಣಗಳನ್ನು ಹುಡುಕುವುದು, ಈ ಮಾಲಿನ್ಯವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸುವುದು, ಸಮಸ್ಯೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವುದು, ಮಾಲಿನ್ಯದ ಕುರಿತು ಸರ್ಕಾರದ ಗಮನ ಸೆಳೆಯುವುದು ಹಾಗೂ ಒತ್ತಡ ಹೇರುವುದು. ನ್ಯಾಯಾಂಗದ ಮೊರೆ ಹೋಗುವುದು ಮತ್ತು ಮಾಲಿನ್ಯದ ವಿರುದ್ದ ಹೋರಾಡಬೇಕು ಎಂದು ಸಲಹೆ ಕೊಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ಹಿಂದೆ ಮಣ್ಣು ಶುದ್ಧವಾಗಿತ್ತು. ಕಳೆದ ಐದು ದಶಕಗಳಲ್ಲಿ ಮಣ್ಣು ಸಂಪೂರ್ಣವಾಗಿ ಮಲಿನಗೊಂಡಿದೆ.ಇದರಿಂದ ನೀರು, ಗಾಳಿ ಎಲ್ಲದರ ಮೇಲೂ ಪರಿಣಾಮ ಬೀರಿದೆ. ಸದ್ಯ ದೊಡ್ಡ ಪ್ರಮಾಣದ ಪರಿಸರ ಹತ್ಯೆ ಹಾಗೂ ಸಣ್ಣ ಪ್ರಮಾಣದ ಅರಿವು ಮೂಡುತ್ತಿದೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಈ ಬಗ್ಗೆ ಜನರು ಹಾಗೂ ಮಕ್ಕಳಿಗೆ ಪರಿಸರದ ಅರಿವು ಮೂಡಿಸಬೇಕಿದೆ ಎಂದರು.
ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶಮೂರ್ತಿ ಮಾತನಾಡಿ, ಪ್ರಸ್ತುತ ಪರಿಸ್ಥಿತಿ ತೀರಾ ಗಂಭೀರವಾಗುತ್ತಿದೆ. ಹವಾಮಾನ ತುರ್ತು ಪರಿಸ್ಥಿತಿ ಬಂದಿದೆ ಎಂದು ವಿಜ್ಞಾನಿಗಳು ನೀಡುತ್ತಿದ್ದ ಎಚ್ಚರಿಕೆಗಳು ನಿಜವಾಗುತ್ತಿವೆ. ವಿಶ್ವದ ಹಲವೆಡೆ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ 2050ರ ಹೊತ್ತಿಗೆ ಜಾಗತಿಕ ತಾಪಮಾನ ಸರಾಸರಿ ಮೂರು ಡಿಗ್ರಿ ಸೆಲ್ಸಿಯಸ್ ಮತ್ತು 2100ರ ಇಸವಿ ವೇಳೆಗೆ 8 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಲಿದೆ ಎಂದು ತಜ್ಞರು ಅಂದಾಜು ಮಾಡುತ್ತಿದ್ದಾರೆ. ಅಂತಹ ತಾಪಮಾನದಲ್ಲಿ ಈ ಭೂಮಿಯ ಮೇಲೆ ಯಾವ ಜೀವ ಸಂಕುಲವು ಉಳಿದಿರಲಾರವು ಎಂದು ಕಳವಳ ವ್ಯಕ್ತಪಡಿಸಿದರು.
ಪರಿಸ್ಥಿತಿ ಇಷ್ಟೊಂದು ಹದಗೆಡಲು ಪರಿಸರದ ಮೇಲೆ ನಡೆದಿರುವ ಅವ್ಯಾಹತ ದೌರ್ಜನ್ಯವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ನಾಗರಿಕತೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಬರೆದು ಮಾಡುತ್ತಿದ್ದೇವೆ. ಹಲವು ಬಗೆಯ ಹಸಿರು ಮನೆ ಅನಿಲಗಳನ್ನು ಹೊರ ಬಿಟ್ಟು ಭೂಮಿಯ ತಾಪಮಾನ ಹೆಚ್ಚಿಸಿದ್ದೇವೆ. ವಾಯುಮಾಲಿನ್ಯ ಹೆಚ್ಚುತ್ತಿದೆ. ಮಣ್ಣು ಮತ್ತು ನೀರಿಗೆ ನಾನಾ ಬಗೆಯ ವಿಷ ಹಾಕಿ ಜಲಮೂಲಗಳನ್ನೆಲ್ಲ ಕೊಲ್ಲುತ್ತಿದ್ದೇವೆ. ಮಾಡು ಇಲ್ಲವೇ ಮಡಿ ಎಂಬ ಸ್ಥಿತಿ ಬಂದಿರುವ ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಸಾವಿರಾರು ಚಿಂತಕರು, ಹೋರಾಟಗಾರರು, ನಿಜವಾದ ಪರಿಸರ ಕಾಳಜಿ ಉಳ್ಳವರು ಪರಿಸರ ಸಂರಕ್ಷಣೆಗಾಗಿ ಧ್ವನಿ ಎತ್ತುತ್ತಿದ್ದಾರೆ ಎಂದರು.
ಇದೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ಭಾರತೀಯ ರೆಡ್ ಕ್ರಾಸ್ ಸಭಾಪತಿ ಎಚ್.ಪಿ. ಮೋಹನ್, ಅನಂತಕುಮಾರ್, ನಿವೃತ್ತ ತಹಸೀಲ್ದಾರ್ ರುದ್ರಾಪ್ಪಾಜಿ, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಸೇರಿದಂತೆ ವಿವಿಧ ಪರಿಸರ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ಶಾಲಾ ಕಾಲೇಜು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net