ಕೊಳ್ಳೇಗಾಲ: ಕಳೆದ ನಾಲ್ಕೈದು ದಿನದ ಹಿಂದಷ್ಟೇ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಪ್ರವಾಹ ತಗ್ಗಿದೆ. ನದಿ ತೀರದ ತಾಲೂಕಿನ ಗ್ರಾಮಗಳ ಜಮೀನುಗಳಲ್ಲಿ ಹರಿಯುತ್ತಿದ್ದ ನೀರು ನದಿಗೆ ಸೇರಿರುವುದರಿಂದ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಪ್ರವಾಹ ಆತಂಕ ದೂರವಾಗಿದೆ.
ಕಾವೇರಿ ಜಲನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ವ್ಯಾಪಕವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಅಧಿಕ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿತ್ತು. ಪರಿಣಾಮ ಜು.27 ರಂದು ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಮುಳ್ಳೂರು, ಹಳೇ ಹಂಪಾಪುರ, ಹಳೇಅಣಗಳ್ಳಿ ಗ್ರಾಮದ ಹಲವಾರು ಎಕರೆ ಜಮೀನುಗಳು ಜಲಾವೃತಗೊಂಡಿತ್ತು. ಕಬ್ಬು, ಭತ್ತ, ರಾಗಿ, ಜೋಳ, ತರಕಾರಿ ಹಾಗೂ ಸೊಪ್ಪು ಬೆಳೆಗಳನ್ನು ಬೆಳೆದ ರೈತರು ಕಂಗಾಲಾಗಿದ್ದರು. ಇದೀಗ ಕಾವೇರಿ ಕಣಿವೆಯಲ್ಲಿ ಮಳೆ ಕಡಿಮೆಯಾಗಿದ್ದು ಕಳೆದ ಎರಡು ದಿನಗಳಿಂದ ಕಬಿನಿ ಹಾಗೂ ಕೆಆರ್‌ಎಸ್ ಅಣೆಕಟ್ಟಿನಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ ತಗ್ಗಿರುವುದ್ದರಿಂದ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದ ಕಾವೇರಿ ನದಿ ಸಹಜ ಸ್ಥಿತಿಗೆ ಮರಳುತ್ತಿದೆಯಾದರೂ ಮುಂದೇನಾದರು ಮಳೆ ಮುಂದುವರಿದರೆ ಪ್ರವಾಹ ಆಗಬಹುದೆಂಬ ಭಯವೂ ಸ್ಥಳೀಯರನ್ನು ಆವರಿಸಿದೆ.
ನದಿ ಪಾತ್ರದ ಜಮೀನುಗಳಲ್ಲಿ ನದಿಯಂತೆ ನಿಂತಿದ್ದ ನೀರು ಹಳ್ಳ, ಕಾಲುವೆಗಳ ಮೂಲಕ ನದಿಯ ಒಡಲ ಸೇರುತ್ತಿದೆ. ಮುಳುಗಡೆಯಾಗಿದ್ದ ಜಮೀನಿನಲ್ಲಿ ನೀರು ಇಂಗ ತೊಡಗಿದೆ. ಸದ್ಯ ನದಿ ಪಾತ್ರದಲ್ಲಿರುವ ಜನರಲ್ಲಿ ಪ್ರವಾಹ ಆತಂಕ ದೂರವಾಗಿದ್ದು ನಿಟ್ಟುಸಿರು ಬಿಟ್ಟಿದ್ದಾರೆ.
ಎಚ್ಚರಿಕೆ ವಹಿಸಿರುವ ಜಿಲ್ಲಾ, ತಾಲೂಕು ಆಡಳಿತ:
ಜು.27 ರಂದು 1.25 ಸಾವಿರ ಕ್ಯೂಸೆಕ್ ನೀರನ್ನು ಕಬಿನಿ ಹಾಗೂ ಕೆಆರ್‌ಎಸ್ ಅಣೆಕಟ್ಟೆಯಿಂದ ಬಿಡಲಾಗಿತ್ತು. ಇದರಿಂದ ಜಮೀನುಗಳು ಜಲಾವೃತವಾಗಿತ್ತು. ಕಳೆದ ಮೂರು ದಿನಗಳಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣ ತಗ್ಗಿದೆ. ಬುಧವಾರ ಎರಡು ಜಲಾಶಯದಿಂದ 31 ಸಾವಿರ ಕ್ಯೂಸೆಕ್, ಗುರುವಾರ 30 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ನದಿಯಲ್ಲಿ ನೀರಿನ ಮಟ್ಟ ಇಳಿಮುಖ ಕಂಡಿದೆ. ಉಪವಿಭಾಗಧಿಕಾರಿ ಬಿ.ಆರ್. ಮಹೇಶ್ ನಿತ್ಯವೂ ನದಿ ಪಾತ್ರದ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳು ಅಣೆಕಟ್ಟೆಯಿಂದ ಬಿಡಲಾಗುತ್ತಿರುವ ನೀರಿನ ನಿತ್ಯದ ಮಾಹಿತಿಯನ್ನು ಸಂಗ್ರಹಿಸಿ ನದಿ ಪಾತ್ರಗಳ ಗ್ರಾಮಗಳ ಮೇಲೆ ನಿಗಾ ವಹಿಸಿದ್ದಾರೆ.
ಆಗಸ್ಟ್‌ನಲ್ಲಿ ಮಳೆ ಮುಂದುವರಿಯುವ ಸಾಧ್ಯತೆ
ಹವಾಮಾನ ಮಾಹಿತಿಯಂತೆ ಆಗಸ್ಟ್‌ನಲ್ಲಿ 1 ವಾರ ಕಾಲ ಮಳೆಯಾಗುವ ಸಂಭವವಿದ್ದು, ಅಂದುಕೊಂಡಂತೆ ಅಧಿಕ ಪ್ರಮಾಣದಲ್ಲಿ ಮಳೆಯಾದರೆ ಪ್ರವಾಹ ಸಮಸ್ಯೆ ಎದುರಾಗಬಹುದೆಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮವಹಿಸಿದೆ.
ಕಾವೇರಿ ನದಿ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ನೀರಿನ ಜತೆ ಬಂದ ಮೆಕ್ಕಲು ಮಣ್ಣು ಜಮೀನುಗಳಲ್ಲಿ ಬೆಳೆದಿದ್ದ ಫಸಲಿಗೆ ಸೇರಿರುವುದರಿಂದ ತೊಂದರೆಯಾಗಿದೆ. ಭತ್ತ, ರಾಗಿ, ಜೋಳ, ತರಕಾರಿ, ಸೊಪ್ಪು ಬೆಳೆಗಳು ನೀರಿನಲ್ಲಿ ಮುಳುಗಡೆಗೊಂಡಿದ್ದು, ಇದರಿಂದ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಹಾಗೂ ನದಿ ನೀರು ಇಂಗಿ ಫಸಲು ಚೇತರಿಸಿಕೊಳ್ಳುತ್ತದೆಯೇ ಎಂಬ ಲೆಕ್ಕಾಚಾರದಲ್ಲಿ ರೈತರು ಮುಳುಗಿದ್ದಾರೆ.
ಕಳೆದ ವರ್ಷವೈ ಪ್ರವಾಹ ಸಂಕಷ್ಟ ನೆರೆಯು ನದಿ ಪಾತ್ರದ ಗ್ರಾಮಗಳಿಗೆ ಶಾಪವಾಗಿದೆ. 2024 ರಲ್ಲಿ ವಾಡಿಕೆಗಿಂತಲೂ ಹೆಚ್ಚಾಗಿ ಮಳೆಯಾದ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ಭರ್ತಿಯಾಗಿತ್ತು. ಈ ವೇಳೆ 2.20 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಹಾಗಾಗಿ, 2024 ಜು.31 ರಂದು ತಡರಾತ್ರಿ ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಮುಳ್ಳೂರು, ಹಳೇ ಅಣಗಳ್ಳಿ, ಹಳೇ ಹಂಪಾಪುರ, ಹರಳೆ, ದಾಸನಪುರ, ಯಡಕೂರಿಯ ಗ್ರಾಮಗಳು ಜಾಲವೃತಗೊಂಡಿದ್ದವು. ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆದು ಪ್ರವಾಹ ಪೀಡಿತಕೊಳಗಾದ ಹಳೇ ಅಣಗಳ್ಳಿ, ಹರಳೆ, ದಾಸನಪುರ, ಮುಳ್ಳೂರು ಗ್ರಾಮಗಳ ಜನರನ್ನು ಕರೆದೊಯ್ದು ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಿತ್ತು. ನದಿ ನೀರು ತಗ್ಗಿದ ಬಳಿಕ ಆ.3 ರಂದು ತಾಲೂಕು ಆಡಳಿತ ಕಾಳಜಿ ಕೇಂದ್ರದಿಂದ ಜನರನ್ನು ಗ್ರಾಮಗಳಿಗೆ ಕಳುಹಿಸಿಕೊಟ್ಟರು. ಆ.4 ರಂದು ಸಂತ್ರಸ್ತರು ಸಂರ್ಪೂಣವಾಗಿ ಸ್ವಗ್ರಾಮಗಳಿಗೆ ಮರಳಿದರು.
ಕೊಡಗು, ಹಾಸನ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಕಳೆದ ಗುರುವಾರ ಸೇರಿದಂತೆ ಕಳೆದ 2 ದಿನಗಳಲ್ಲಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ನದಿಗೆ 55 ರಿಂದ 60 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಹಾಗಾಗಿ ನದಿ ನೀರಿನ ಮಟ್ಟ ಇಳಿಮುಖಗೊಂಡಿದೆ. ಪ್ರವಾಹ ಆತಂಕ ಸದ್ಯಕ್ಕಿಲ್ಲ. ಆಗಸ್ಟ್‌ನಲ್ಲಿ 1 ವಾರ ಮಳೆಯಾಗುವ ಸಂಭವವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಬಿ.ಆರ್.ಮಹೇಶ್ ಉಪವಿಭಾಗಾಧಿಕಾರಿ, ಕೊಳ್ಳೇಗಾಲ