

ಹೂವಿನಹಡಗಲಿ: ತಾಲೂಕಿನಲ್ಲಿ ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಇತ್ತೀಚಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಂಜೆಯಾಗುತ್ತಿದ್ದಂತೆ ಮನೆಯೊಳಗೆ ಹಾಗೂ ಸುತ್ತಲ ಪ್ರದೇಶದಲ್ಲಿ ಸೊಳ್ಳೆಗಳು ದಾಂಗುಡಿ ಇಡುತ್ತಿವೆ. ರೈತರು ಜಾನುವಾರುಗಳಿಗೂ ಸೊಳ್ಳೆ ಪರದೆ ಕಟ್ಟುವ ಮೂಲಕ ಸಂರಕ್ಷಿಸುತ್ತಿದ್ದಾರೆ.
ಹರವಿ, ಮೈಲಾರ, ನಂದಿಗಾವಿ, ಬನ್ನಿಮಟ್ಟಿ, ಮಕರಬ್ಬಿ, ಅಂಗೂರು, ಕೋಟಿಹಾಳ, ಬ್ಯಾಲಹುಣಸಿ, ಮಾಗಳ, ರಾಜವಾಳ, ಹೊನ್ನೂರು, ನವಲಿ, ಕಾಗನೂರು, ಕೊಂಬಳಿ, ಮದಲಗಟ್ಟಿ, ಕಂದಗಲ್, ಪುರ, ಹಕ್ಕಂಡಿ, ಅಂಕ್ಲಿ, ಸೇರಿದಂತೆ ಇತರ ಭಾಗಗಳಲ್ಲಿ ಇತ್ತೀಚಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಇದರಿಂದಾಗಿ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ. ಜನರು ರಾತ್ರಿ ಸೊಳ್ಳೆ ಪರದೆ ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಪಂ ಮಟ್ಟದಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.