

ಜೇವರ್ಗಿ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭೀಮೆ ಮೈದುಂಬಿ ಹರಿಯುತ್ತಿದ್ದಾಳೆ. ನದಿಗೆ ಇನ್ನಷ್ಟು ಪ್ರವಾಹ ಬರುವ ಸಾಧ್ಯತೆ ಇದ್ದು, ನದಿ ತೀರದ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ಕಟ್ಟಿಸಂಗಾವಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಅವರು, ನದಿ ನೀರು ಗ್ರಾಮಗಳಿಗೆ ನುಗ್ಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಯಾರೂ ನದಿ ಪಾತ್ರಕ್ಕೆ ಹೋಗಬಾರದು. ಜಾನುವಾರುಗಳನ್ನು ಬಿಡಬಾರದು. ಅಲ್ಲದೆ ಅಧಿಕಾರಿಗಳು ನೆರೆ ಬಗ್ಗೆ ಅಲರ್ಟ್ ಆಗಿ ಇರಬೇಕು ಎಂದು ತಾಕೀತು ಮಾಡಿದರು.
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಾಲೂಕಿನಲ್ಲಿ ಸುಮಾರು ೫೨ ಮನೆಗಳು ಕುಸಿದಿವೆ. ಸಮೀಕ್ಷೆ ಮುಂದುವರಿದಿದೆ ಎಂದು ತಹಸೀಲ್ದಾರ್ ರಾಜೇಶ್ವರಿ ಪಿ.ಎಸ್. ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಮಮತಾ ಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಋಷಿಕೇಶ ದಂತಕಾಳೆ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ಪಂಚಾಯತ್‌ರಾಜ್ ಇಲಾಖೆ ಸಹಾಯಕ ಅಭಿಯಂತರ ಭೀಮರಾವ ಪಾಟೀಲ್, ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಭೀಮಸೇನ್ ಜೋಶಿ ಇತರರಿದ್ದರು.