ನದಿ ತೀರದ ಗ್ರಾಮಗಳಲ್ಲಿ ಅಧಿಕಾರಿಗಳಿಂದ ಜಾಗೃತಿ

ydg04
Published on

ಕೊಡೇಕಲ್: ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಸೋಮವಾರ ಒಳಹರಿವಿನಲ್ಲಿ ಹೆಚ್ಚಾಗಿದ್ದು, ಮಧ್ಯಾಹ್ನ ಕೃಷ್ಣಾ ನದಿಗೆ ೧.೪೫ ಲಕ್ಷ ಕ್ಯೂಸೆಕ್ ನೀರು ೨೫ ಗೇಟ್‌ಗಳಿಂದ ನೀರು ಬಿಡಲಾಗಿದೆ.

ಜಲಾಶಯಕ್ಕೆ ಒಳಹರಿವಿನಲ್ಲಿ ಹೆಚ್ಚಳವಾಗಿದ್ದರಿಂದ ಅದೇ ಪ್ರಮಾಣದ ನೀರು ಸಹ ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದ ನದಿ ತೀರದ ಗ್ರಾಮಗಳಾದ ನಾರಾಯಣಪುರ ದೇವರಗಡ್ಡಿ, ಜಂಜಿಗಡ್ಡಿ, ತಂಗಡಬೈಲ, ಅಮ್ಮಾಪುರ ಎಸ್.ಕೆ., ರಾಯನಗೋಳ, ಬಂಡೋಳ್ಳಿ, ತಿಂಥಣಿ, ಶೆಳ್ಳಗಿ, ಮುಷ್ಠಳ್ಳಿ, ಚೌಡೇಶ್ವರಿಹಾಳ ಗ್ರಾಮ ಸೇರಿ ಇತರೆ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ನಿಗಮದ ಅಧಿಕಾರಿಗಳು ಈ ಗ್ರಾಮಗಳಲ್ಲಿ ಡಂಗೂರ ಸಾರಿ ಎಚ್ಚರಿಕೆ ನೀಡುವ ಮೂಲಕ ಗ್ರಾಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಈ ಕುರಿತು ಮಾತನಾಡಿದ ನಾಡ ಕಚೇರಿ ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಈಗಾಗಲೇ ನದಿ ತೀರದ ಗ್ರಾಮಗಳ ಜನರಿಗೆ ಪ್ರವಾಹ ಕುರಿತಾಗಿ ಡಂಗೂರ ಸಾರಿ ಎಚ್ಚರಿಕೆ ನೀಡಲಾಗಿದೆ. ಗ್ರಾಪಂಗಳು ಕೂಡ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಕರ‍್ಯ ನಡೆದಿದೆ. ಇನ್ನೂ ಹೆಚ್ಚಿನ ನೀರು ಬರುವ ಸಾಧ್ಯತೆ ಇದ್ದು, ಅಮ್ಮಾಪೂರ.ಎಸ್.ಕೆ ಮತ್ತು ಜುಮಾಲಪುರ ದೊಡ್ಡ ತಾಂಡಾಗಳಲ್ಲಿ ಕೆಲ ಕುಟುಂಬಗಳು ನದಿ ತೀರದ ಜಮೀನುಗಳಲ್ಲಿ ವಾಸವಾಗಿದ್ದು ಅವರನ್ನು ಮನವೊಲಿಸಿ ಸ್ಥಳಾಂತರ ಮಾಡಲಾಗಿದೆ ಎಂದರು. ಸಧ್ಯ ಜಲಾಶಯದ ೨೫ ಮುಖ್ಯಗೇಟ್‌ಗಳ ಮೂಲಕ ೧.೪೫ ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಪ್ರಭಾರಿ ಎಇಇ ವಿಜಯಕುಮಾರ ಅರಳಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net