

ಜಮಖಂಡಿ: ಜೀವವಿದ್ದಾಗ ರಕ್ತದಾನ, ನಿಧನದ ನಂತರ ನೇತ್ರದಾನ ಮಾಡಿ ಇನ್ನೊಬ್ಬರ ಜೀವನಕ್ಕೆ ಬೆಳಕಾಗಬೇಕೆಂದು ಎಸಿ ಸಂತೋಷ ಕಾಮಗೌಡ ಹೇಳಿದರು.
ನಗರದ ದೇಸಾಯಿ ವೃತ್ತದಲ್ಲಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ ವಿವಿಧ ಶಾಲೆ-ಕಾಲೇಜು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೇತ್ರದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕ್ಯೂಆರ್ ಕೋಡ್ ಸ್ಕಾೃನ್ ಬಳಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನೇತ್ರದಾನದ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ತಮ್ಮ ಸುತ್ತಮುತ್ತ ಯಾರಾದರೂ ನಿಧನರಾದರೆ ಅವರ ಕುಟುಂಬದವರ ಮನವೊಲಿಸಿ ವೈದ್ಯರನ್ನು ಸಂಪರ್ಕಿಸಿದರೆ ಸ್ಥಳಕ್ಕೆ ಬಂದು ಕಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಪ್ರಕ್ರಿಯೆ ನಿಧನರಾದ ಆರು ಗಂಟೆಯೊಳಗೆ ಮಾತ್ರ ನಡೆಯಬೇಕು ಎಂದರು.
ಡಾ. ಎಚ್.ಜಿ. ದಡ್ಡಿ ಮಾತನಾಡಿ, ಅನ್ನದಾನ, ವಿದ್ಯಾದಾನ, ರಕ್ತದಾನ, ಅಂಗಾಂಗದಾನ, ನೇತ್ರದಾನ ಮಾಡಬೇಕು. ನಮ್ಮ ದೇಶದಲ್ಲಿ 1.5 ಕೋಟಿ ಜನ ಅಂಧತ್ವದಿಂದ ಬಳಲುತ್ತಿದ್ದಾರೆ. ಆದರೆ, ಕೇವಲ 25-30 ಸಾವಿರ ನೇತ್ರ ದಾನಿಗಳಿದ್ದಾರೆ. ಅಂಧರ ಬಾಳು ಬೆಳಕಾಗಬೇಕಾದರೆ ನೇತ್ರದಾನಿಗಳು ಮುಂದಾಗಬೇಕು ಎಂದು ತಿಳಿಸಿದರು.
ಹುನ್ನೂರ ಸರ್ಕಾರಿ ಕಾಲೇಜಿನ ಬಿಎಸ್‌ಡಬ್ಲುೃ ವಿದ್ಯಾರ್ಥಿಗಳು ನೇತ್ರದಾನದ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು.
ದೇಸಾಯಿ ವೃತ್ತದಿಂದ ಆರಂಭಗೊಂಡು ಜಾಥಾ ಅಶೋಕ ವೃತ್ತ, ಟಿಪ್ಪು ಸುಲ್ತಾನ ವೃತ್ತದಲ್ಲಿ ಹಾಯ್ದು ಎಂ.ಎಂ. ಜೋಶಿ ಆಸ್ಪತ್ರೆಗೆ ತೆರಳಿತು. ಜಾಥಾದಲ್ಲಿ ವಿವಿಧ ಸಂಘ-ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯುಟೂಬ್ ಸ್ಟಾರ್ ನಿಂಗರಾಜ ಸಿಂಗಾಡಿ, ನೇತ್ರತಜ್ಞೆ ದೀಪಾ ಮುಗಳಿಉದಗಟ್ಟಿ, ಆಡಳಿತಾಧಿಕಾರಿ ಸುಧಾ ಪಾಟೀಲ, ಪಿಆರ್‌ಒ ರವಿ ದಾಸರ, ವಿವಿಧ ಕಾಲೇಜಿನ ಉಪನ್ಯಾಸಕರು ಇದ್ದರು.