

ಬಸವಕಲ್ಯಾಣ: ಮಾದಾರ ಚನ್ನಯ್ಯನವರು ಶ್ರೇಷ್ಠ ಶರಣರಾಗಿದ್ದು, ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಪರಿಶುದ್ಧ ಮನಸ್ಸಿನಿಂದ ಮಾಡುವ ಕಾಯಕವೇ ಭಕ್ತಿ ಎಂದು ಸಾರಿದ್ದಾರೆ. ಅವರ ಬಗ್ಗೆ ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಸ್ತುತಿಸಿದ್ದಾರೆ ಎಂದು ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ನುಡಿದರು.
ಮಾದಾರ ಚನ್ನಯ್ಯ ಅರಿವು ಪೀಠದಿಂದ ಪೀಠದ ಪರಿಸರದಲ್ಲಿ ಭಾನುವಾರ ಆಯೋಜಿಸಿದ್ದ ೨೬ನೇ ಮಾದಾರ ಚನ್ನಯ್ಯ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಚನ್ನಯ್ಯನವರು ತೋರಿದ ಮಾರ್ಗದಲ್ಲಿ ನಡೆಯಬೇಕು. ನಡೆ-ನುಡಿ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬೇಲೂರ ಉರಿಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಕನಸುಗಳನ್ನು ಬಿತ್ತಿದವರು ಡಾ.ಅಂಬೇಡ್ಕರ್ ಅವರು. ಸಂವಿಧಾನದ ಮೂಲಕ ಎಲ್ಲರಿಗೂ ಸಮಾನವಾದ ಹಕ್ಕು ನೀಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು. ಸಮಾಜದ ಪ್ರಗತಿಗೆ ಶಿಕ್ಷಣವೇ ಮೂಲ ಮಂತ್ರ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಜತೆಗೆ ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ತಾಯಂದಿರ ಪಾತ್ರ ಮುಖ್ಯ ಎಂದರು.
ಗುಂಜಟ್ಟಿಯ ಸಮಾಜದ ಮುಖಂಡ ವಿಷ್ಣು ಪಂಡಿತ ಉಪನ್ಯಾಸ ಮಂಡಿಸಿ, ಶೈಕ್ಷಣಿಕ ಪ್ರಗತಿಯಲ್ಲಿ ಸಮಾಜದ ಪ್ರಗತಿ ಅಡಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಸಂಸ್ಕಾರ ನೀಡಲು ಆದ್ಯತೆ ನೀಡಿದಾಗ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದು ಹೇಳಿದರು.
ಬೀದರ್‌ನ ಕರ್ನಾಟಕ ಮಾದಿಗ ವೇಲ್ಫೆರ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ, ನೂಲಿಯ ಚಂದಯ್ಯ ಗವಿಯ ಪೂಜ್ಯ ಶರಣೆ ಚಿತ್ರಮ್ಮ ತಾಯಿ ಸಾನ್ನಿಧ್ಯ, ಪೀಠದ ಸಂಸ್ಥಾಪಕ ಅಧ್ಯಕ್ಷ ಶ್ರೀ ಕಾಂತ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಳ್ಳಾರಿಯ ಗ್ರಾಮ ವಿಕಾಸ ಸಮಾಜ ಕಾರ್ಯಕರ್ತ ದಾಮೋದರ, ಕ್ಯಾಲೆಂಡರ್ ಬಿಡುಗಡೆ ಮಾಡಿದ ಚಿತ್ರದುರ್ಗದ ತಿಪ್ಪೇಸ್ವಾಮಿ ಮೈಲಾನಹಳ್ಳಿ ಮಾತನಾಡಿದರು.
ಕೊಪ್ಪಳನ ಲೇಖಕ ನಾಗಲಿಂಗ ಮಳೆಕೋಪ್ಪ, ನಗರಸಭೆ ಸದಸ್ಯೆ ಶಾಂತಾಬಾಯಿ ಲಾಡೆ, ಆದಿ ಜಾಂಬವ ಸಂಘದ ಅಧ್ಯಕ್ಷ ಯುವರಾಜ ಭೆಂಡೆ ಇದ್ದರು. ಚೇತನಾ ಭಗವತ್ ಸ್ವಾಗತಿಸಿದರು. ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ರಮೇಶ ಉಮ್ಮಾಪುರೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ರಾಜಕುಮಾರ ನಿರೂಪಣೆ ಮಾಡಿದರು.
ಭವ್ಯ ಮೆರವಣಿಗೆ: ನಗರದ ಬಸವೇಶ್ವರ ವೃತ್ತದಿಂದ ತ್ರಿಪುರಾಂತನ ಮಾದಾರ ಚನ್ನಯ್ಯ ಅರಿವು ಪೀಠದವರೆಗೆ ಸಾರೋಟಿನಲ್ಲಿ ಮಾದಾರ ಚನ್ನಯ್ಯನವರ ಭಾವಚಿತ್ರ ಭವ್ಯ ಮೆರವಣಗೆ ನಡೆಯಿತು. ಕ್ರೈಂ ವಿಭಾಗದ ಪಿಎಸ್‌ಐ ಸುರೇಶ ಹಜ್ಜರಗಿ ಚಾಲನೆ ನೀಡಿದರು. ಪೂಜ್ಯ ಚಿತ್ರಮ್ಮತಾಯಿ, ಶ್ರೀ ಕಾಂತ ಸ್ವಾಮೀಜಿ, ಪ್ರಮುಖರಾದ ಭೆಂಡೆ, ಸಂತೋಷ ಮುಜನಾಯಕ, ಸಾಹಿತಿ ಸೂರ್ಯಕಾಂತ ಸಸಾನೆ, ಪತ್ರಕರ್ತ ರಾಜೇಂದ್ರ ಗೋಖಲೆ, ಮಚೇಂದ್ರ ತಾಂಬೋಳೆ, ಪಾಂಡುರಂಗ ಸೂರ್ಯವಂಶಿ, ಆಕಾಶ ಸಂಗನೂರೆ, ಉಮೇಶ ಸಂಗನೂರೆ, ಉತ್ತಮ ಲಾಡೆ, ಪ್ರಭು ಲಾಡೆ, ಅಮರ ಭಗವತ್, ಅರವಿಂದ ಭೆಂಡೆ, ಶಿವು ಸಂಗನೂರ ಭಾಗವಹಿಸಿದ್ದರು.
ಕಾಯಕ ಭಕ್ತಿ ಮಹತ್ವ ನೀಡಿದ ಮಾತಂಗ ಸಮಾಜ ವಿಶ್ವಕ್ಕೆ ಮಾದರಿ. ಈ ಸಮಾಜದ ಶ್ರೇಷ್ಠತೆ, ಹಿರಿಮೆ, ಗರಿಮೆ ತಿಳಿಸಿಕೊಡುವ ಕೆಲಸ ನಡೆಯಬೇಕು. ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಿಕೊಡುವುದು, ರಾಷ್ಟçಭಕ್ತಿ, ಧರ್ಮ ಭಕ್ತಿ ಬೆಳೆಸುವುದು. ಅರಿವು ಮೂಡಿಸುವ ಮೂಲಕ ಜ್ಞಾನದ ಬೆಳಕು ತೋರುವುದೇ ಮಾದಾರ ಚನ್ನಯ್ಯ ಅರಿವು ಪೀಠದ ಮೂಲ ಆಶಯವಾಗಿದೆ.
| ದಾಮೋದರ ಗ್ರಾಮ ವಿಕಾಸ ಸಮಾಜ ಕಾರ್ಯಕರ್ತ ಬಳ್ಳಾರಿ