

ಯಳಂದೂರು: ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಮಂಗಳವಾರ ನಡುರಸ್ತೆಯಲ್ಲಿ ಕುಳಿತು ಮಕ್ಕಳಿಗೆ ಪಾಠ ಮಾಡಲಾಯಿತು.
ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ-1ರಲ್ಲಿ ಈ ದುಸ್ಥಿತಿ ಇದೆ. ಮಕ್ಕಳನ್ನು ನಡು ರಸ್ತೆಯಲ್ಲೇ ಕುಳ್ಳಿರಿಸಿ ಪಾಠ ಪ್ರವಚನ ಕಲಿಸಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತುಕೊಂಡ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಧ್ಯಾಹ್ನನದ ನಂತರ ಅಂಗನವಾಡಿ ಕೇಂದ್ರವನ್ನು ಗ್ರಾಮದ ಮುಖ್ಯರಸ್ತೆಯಲ್ಲಿರುವ ಶಾಲೆಯ ಕೊಠಡಿಗೆ ಸ್ಥಳಾಂತರಿಸಿದರು.
80 ಸಾವಿರ ರೂ. ವೆಚ್ಚದಲ್ಲಿ ಅಭಿವೃದ್ಧಿ: ವೈ.ಕೆ.ಮೋಳೆ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಇಲಾಖೆ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿಯಿಂದ 80 ಸಾವಿರ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರವನ್ನು ಹಲವು ತಿಂಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಕಾಮಗಾರಿ ಕಳಪೆಯಿಂದ ಕೂಡಿದೆ. ಕಟ್ಟಡ ಮತ್ತೆ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಛಾವಣಿಯ ಗಾರೆ ಚಕ್ಕೆ ಉದುರಿ ಬೀಳುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡ ದುರಸ್ತಿಪಡಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಮಳೆ ಬಂದರೆ ವೈ.ಕೆ.ಮೋಳೆ ಗ್ರಾಮದ ಅಂಗನವಾಡಿ ಕೇಂದ್ರದ ಒಳಗೆ ನೀರು ನುಗ್ಗಿ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿತ್ತು, ಮಾಹಿತಿ ಅರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದು ಶಾಲೆಯ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ತೆರೆಯಲಾಗಿದೆ. ಸಕಲೇಶ್ವರ್, ಸಿಡಿಪಿಒ,ಯಳಂದೂರು