ನಡು ಬೀದಿಯಲ್ಲೇ ಕರೆಂಟ್ ಶಾಕ್: ಮಹಿಳೆಗೆ ಗಂಭೀರ ಗಾಯ

current
Published on

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ರಸ್ತೆಯಲ್ಲಿನ ವಿದ್ಯುತ್ ಕಂಬ ಜಂಕ್ಷನ್ ಬಾಕ್ಸ್ನ ವೈರ್‌ಗೆ ಬಾಲಕ ಬಲಿಯಾದ ಘಟನೆ ಮರೆಯುವ ಮುನ್ನವೇ ಸೋಮವಾರ ಮತ್ತೊಂದು ಪ್ರಕರಣ ಸಂಭವಿಸಿದ್ದು, ವಿದ್ಯುತ್ ತಗುಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಭಾಗ್ಯಶ್ರೀ ಗಂಭೀರವಾಗಿ ಗಾಯಗೊಂಡ ಮಹಿಳೆ. ನಗರದ ಮೋಹನ್ ಲಾಡ್ಜ್ ಬಳಿ ಮುಖ್ಯರಸ್ತೆಯಲ್ಲಿ ಬೆಳಗ್ಗೆ ಮಗನೊಂದಿಗೆ ಬಸ್‌ಗೆ ಬಿಡಲು ಆಗಮಿಸಿದ್ದು, ಬಸ್ ಮೇಲೆ ಬೀದಿ ದೀಪದ ವಿದ್ಯುತ್ ಕಂಬದ ವೈರ್ ಕಡಿದು ಬಿದ್ದಿದ್ದರಿಂದ ಮಹಿಳೆ ಬಸ್‌ಗೆ ಕೈ ಹಚ್ಚಿದ ತಕ್ಷಣ ವಿದ್ಯುತ್ ತಗುಲಿ, ಕುಸಿದು ಬಿದ್ದಿದ್ದು, ಮಹಿಳೆಯ ಹೊಟ್ಟೆ, ಕೈ, ಕಾಲಿಗೆ ಸುಟ್ಟು ಗಾಯಗಳಾಗಿದ್ದು, ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗಿದ್ದ ಪುತ್ರ ಆಯುಷ್‌ಗೂ ಗಾಯಗಳಾಗಿವೆ.

ತಕ್ಷಣ ಸ್ಥಳೀಯರು ಶಾಲೆಯ ಮಕ್ಕಳನ್ನು ರಕ್ಷಿಸಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಮುಂದಕ್ಕೆ ಕಳುಹಿಸಿದ್ದಾರೆ. ಸ್ಥಳಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹಿಳೆಯ ಆರೋಗ್ಯ ವಿಚಾರಣೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net