ನಡಾವಳಿ ಪುಸ್ತಕ ತನಿಖೆಗೆ ಕೈ, ದಳ ಸದಸ್ಯರ ಪಟ್ಟು

9ark-1
ಅರಕಲಗೂಡಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
Published on

ಅರಕಲಗೂಡು: ನಾಲ್ಕು ತಿಂಗಳ ಜಮಾ, ಖರ್ಚುಗಳಿಗೆ ಸಭೆ ಒಪ್ಪಿಗೆ ನೀಡದಿದ್ದರೂ ನಡವಳಿಕೆ ಪುಸ್ತಕದಲ್ಲಿ ಅನುಮೋದನೆ ನೀಡಿರುವುದಾಗಿ ನಮೂದಿಸಿರುವ ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಪಟ್ಟಣ ಪಂಚಾಯಿತಿ ಅಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು.

ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಸದಸ್ಯರು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು.
ಸದಸ್ಯ ಅನಿಕೇತನ್ ಮಾತನಾಡಿ, ಹಿಂದಿನ ಸಭೆಯಲ್ಲಿ ಜೂನ್ 2022 ರಿಂದ ಸೆಪ್ಟೆಂಬರ್ 22 ವರೆಗಿನ ಜಮಾ ಖರ್ಚನ್ನು ಅನುಮೋದನೆಗೆ ಮಂಡಿಸಲಾಗಿತ್ತು. ವೆಚ್ಚಗಳ ಕುರಿತು ಹಲವು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆ ಒಪ್ಪಿಗೆ ನೀಡದೆ ಜಮಾ ಖರ್ಚುಗಳ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆದು ಅನುಮೊದನೆ ಪಡೆಯುವಂತೆ ಸೂಚಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ನಡಾವಳಿಕೆ ಪುಸ್ತಕದಲ್ಲಿ ಒಪ್ಪಿಗೆ ನೀಡಿರುವುದಾಗಿ ನಮೂದಿಸಿ ಸಭೆಯನ್ನು ತಪ್ಪುದಾರಿಗೆ ಎಳೆಯಲಾಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಧ್ಯಕ್ಷರ ಪೀಠದ ಮುಂದೆ ಧರಣಿ ಕುಳಿತರು. ಸದಸ್ಯರಾದ ಅನುಶಾ ಮತ್ತು ಸುಬಾನ್ ಷರೀಪ್ ಇವರಿಗೆ ಸಾಥ್ ನೀಡಿದರು.
ಆಡಳಿತ ಪಕ್ಷದ ಸದಸ್ಯರೇ ಧರಣಿಗೆ ಮುಂದಾಗಿರುವ ಕ್ರಮದಿಂದ ಪಪಂ ಆಡಳಿತ ವೈಖರಿ ಹೇಗಿದೆ ಎಂಬುದು ಜಗಜ್ಜಾಹೀರಾತಂದಾ ಗಿದೆ ಎಂದು ಬಿಜೆಪಿ ಸದಸ್ಯ ನಿಖಿಲ್ ಕುಮಾರ್ ಆರೋಪಿಸಿದರು. ಎರಡೂವರೆ ವರ್ಷಗಳ ಖರ್ಚು ವೆಚ್ಚಗಳ ಬಗ್ಗೆ ತನಿಖೆ ನಡೆಯಬೇಕು ಹಾಗೂ ಲೆಕ್ಕಪರಿಶೋಧನೆ ನಡೆಸಿದ ಅಧಿಕಾರಿಗಳ ಕುರಿತೂ ತನಿಖೆ ನಡೆಸುವಂತೆ ಸದಸ್ಯ ರಮೇಶ್ ವಾಟಾಳ್ ಆಗ್ರಹಿಸಿದರು. ಸಭೆಯಲ್ಲಿ ತೀಮಾನವಾಗುವುದೇ ಒಂದು. ನಡಾವಳಿಕೆ ಪುಸ್ತಕದಲ್ಲಿ ದಾಖಲಾಗುವುದೇ ಬೇರೆಯಾಗಿದೆ. ಸಭೆಯಲ್ಲೇ ನಡಾವಳಿಕೆಯನ್ನು ದಾಖಲು ಮಾಡುವಂತೆ ಆಗ್ರಹಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಉಪಾದ್ಯಕ್ಷೆ ಎಚ್.ಎಸ್.ರಶ್ಮಿ ಆರೋಪಿಸಿದರು.
ಪ್ರಕರಣದ ಕುರಿತು ತನಿಖೆಗೆ ಪತ್ರ ಬರೆಯುವುದಲ್ಲದೆ ಮುಂದಿನ ಸಭೆಯಲ್ಲಿ ಖರ್ಚುವೆಚ್ಚಗಳ ಕುರಿತು ಚರ್ಚಗೆ ಮಂಡನೆ ಮಾಡುವುದಾಗಿ ಅಧ್ಯಕ್ಷೆ ಶಾರದಾ ಭರವಸೆ ನೀಡಿದ ಬಳಿಕ ಧರಣಿ ಕೈ ಬಿಡಲಾಯಿತು.
ವಿವಿಧ ಕಾಮಗಾರಿಗಳಲ್ಲಿ ಉಳಿಕೆಯಾದ 5.54 ಲಕ್ಷ ರೂ.ಹಣವನ್ನು ಒಂದೆ ವಾರ್ಡ್‌ಗೆ ನೀಡಿರುವ ಬಗ್ಗೆ ಸದಸ್ಯ ನಿಖಿಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಇದನ್ನು ತುರ್ತು ಕಾಮಗಾರಿಗಳಿಗೆ ಬಳಸಿ ಇಲ್ಲವೆ ಎಲ್ಲ ವಾರ್ಡಗಳಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡೆವೆ ಮಾತಿನ ಚಕಮಕಿ ನಡೆದು ಕೆಲಕಾಲ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಸದಸ್ಯರನ್ನು ವಿಶ್ವಾಸಕ್ಕೆ ಪಡೆಯಬೇಕು: ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದ ಅಧ್ಯಕ್ಷರ ಕ್ರಮ ವಿರೋಧಿಸಿ ಎರಡೂ ಸಭೆಗಳಿಗೆ ಸದಸ್ಯರು ಗೈರುಹಾಜರಾಗ ಬೇಕಾಯಿತು. ಸಭೆ ಕರೆಯುವ ಮುನ್ನ ಸದಸ್ಯರಿಂದ ವಾರ್ಡ್ ಸಮಸ್ಯೆಗಳ ಬಗ್ಗೆ ತಿಳಿದು ತುರ್ತು ಕಾಮಗಾರಿಗಳನ್ನು ಅಜೆಂಡಾದಲ್ಲಿ ಸೇರಿಸುತ್ತಿಲ್ಲ. ಅಧಿಕಾರಿಗಳು ತಮಗೆ ಬೇಕಾದಂತೆ ವಿಷಯಗಳನ್ನು ಮಂಡನೆ ಮಾಡುತ್ತಿದ್ದಾರೆ, ಇಲ್ಲಿ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ ಎಂದು ಸದಸ್ಯ ಅನಿಕೇತನ್ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯ ಕೃಷ್ಣಯ್ಯ ಇದಕ್ಕೆ ಧ್ವನಿಗೂಡಿಸಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವಿನ ಕಿತ್ತಾಟದಿಂದ ಸಭೆ ನಡೆಯದೆ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯ ರಮೇಶ್ ವಾಟಾಳ್ ಬೇಸರ ವ್ಯಕ್ತಪಡಿಸಿದರು.

ಸದಸ್ಯರಾದ ಪ್ರದೀಪ್ ಕುಮಾರ್, ಸುಮಿತ್ರಾ, ಹೂವಣ್ಣ, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net