ನಡಾವಳಿ ತಿದ್ದುಪಡಿ ಪ್ರಕರಣ ತನಿಖೆಗೆ ನಿರ್ಣಯ

kpp gp
ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಪಂನಲ್ಲಿ ಗ್ರಾಮಸಭೆ ನಡೆಯಿತು. ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಅಭಿಷೇಕ್ ಇತರರಿದ್ದರು.
Published on

ಕೊಪ್ಪ: ಸಾಮಾನ್ಯ ಸಭೆಯ ನಡಾವಳಿ ತಿದ್ದುಪಡಿ ಪ್ರಕರಣದ ಸೂಕ್ತ ತನಿಖೆ ನಡೆಸಲು ಹಿರೇಕೊಡಿಗೆ ಗ್ರಾಪಂನಲ್ಲಿ ಶುಕ್ರವಾರ ನಡೆದ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕ್ಲರ್ಕ್ ಕಂ ಡೇಟಾ ಸಿಬ್ಬಂದಿ ನೇಮಕದಲ್ಲಿ ನಿಯಮಬಾಹಿರ ಕ್ರಮದ ಕುರಿತು ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ವರದಿ ಕುರಿತು ಗ್ರಾಪಂ ಗ್ರಾಮ ಸಭೆಯಲ್ಲಿ ಗಂಟೆಗಳ ಕಾಲ ಚರ್ಚೆ ನಡೆಯಿತು. ಇತರ ಯಾವುದೇ ಚರ್ಚೆ ನಡೆಸಲು ಅವಕಾಶವಿಲ್ಲದಂತೆ ನಡಾವಳಿ ತಿದ್ದಿರುವ ವಿಷಯವೇ ಹೆಚ್ಚು ವಾಗ್ವಾದಕ್ಕೆ ಕಾರಣವಾಯಿತು.

2015ರ ಅ.14ರಂದು ನಡೆದ ಸಾಮಾನ್ಯ ಸಭೆ ನಡಾವಳಿಯಲ್ಲಿ ಖಾಲಿ ಜಾಗ ಬಿಟ್ಟ ಕುರಿತು, ಬಳಿಕ ಅದನ್ನು ಭರ್ತಿ ಮಾಡಿ, ಅಧ್ಯಕ್ಷರ ಸಹಿ ಹಾಕಿರುವ ಬಗ್ಗೆ ಹಾಗೂ ನಡಾವಳಿ ಪುಸ್ತಕ ಪಂಚಾಯಿತಿಯಿಂದ ಹೊರಗೆ ಕೊಂಡೊಯ್ದಿರುವ ಕುರಿತು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, 2014-15ರಿಂದ 2025-26ನೇ ಸಾಲಿನವರೆಗೆ ನಡೆದಿರುವ ಘಟನೆಗಳ ಸೂಕ್ತ ತನಿಖೆಗೆ ನಿರ್ಣಯ ಕೈಗೊಂಡ ಬಳಿಕವಷ್ಟೇ ಸಭೆ ಮುಂದುವರಿಯಿತು.

ಸಭೆ ಆರಂಭದಲ್ಲಿ ಮಾಜಿ ಸದಸ್ಯ ಎಚ್.ಕೆ.ವಿಶ್ವ ಅವರು ನಡಾವಳಿ ತಿದ್ದುಪಡಿ ವಿಷಯ ಪ್ರಸ್ತಾಪಿಸಿ, ತನಿಖೆಗೆ ಆದೇಶ ಮಾಡಲು ಪಂಚಾಯಿತಿ ನಿರ್ಣಯ ಮಾಡುವಂತೆ ಪಟ್ಟು ಹಿಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡಿ.ಎಸ್.ವಿಶ್ವನಾಥ ಶೆಟ್ಟಿ ಮಾತನಾಡಿ, ಪಿಡಿಒ ವಿರುದ್ಧ ನಕಲಿ ಬಿಲ್ ಮಾಡಿರುವ ಆರೋಪವೂ ಇದೆ. ಈ ಹಿಂದೆ ಕೆಲಸ ಮಾಡಿರುವ ಕಡೆ ಅನೇಕ ದೂರುಗಳನ್ನು ಹೊತ್ತು ಬಳಿಕ ಇಲ್ಲಿಗೆ ಬಂದಿದ್ದಾರೆ ಎಂದು ಆರೋಪಿಸಿದರು.

ಮುಖಂಡ ಮಹೇಶ್‌ಕುಮಾರ್ ಕಟ್ಟಿನಮನೆ ಮಾತನಾಡಿ, ಒಳ್ಳೆಯ ಕೆಲಸ ಮಾಡಿ ರಾಜ್ಯದಲ್ಲಿ ಹೆಸರು ಮಾಡಿದ್ದ ಪಂಚಾಯಿತಿಗೆ ಈಗ ದಾಖಲೆ ತಿದ್ದುಪಡಿ ಹೆಸರಿನಲ್ಲಿ ಕೆಟ್ಟ ಹೆಸರು ಬರುತ್ತಿದೆ. ಇಬ್ಬರು ಸಿಬ್ಬಂದಿಯನ್ನು ವಜಾಗೊಳಿಸಿ ಎಂದು ಒತ್ತಾಯಿಸಿದರು.

ಸೂರ್ಯದೇವಸ್ಥಾನದ ಪ್ರದೀಪ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಜಾಗವಿಲ್ಲ. ಜಾಗ ಗುರುತಿಸಿಕೊಡುವಂತೆ ಸರ್ವೇಯರ್ ಅವರನ್ನು ಕೇಳಿದ್ದರೂ ಯಾವುದೇ ಗ್ರಾಮ ಸಭೆಗೂ ಅವರು ಬರುತ್ತಿಲ್ಲ. ಗ್ರಾಪಂ ನಿರ್ಣಯಕ್ಕೆ ಸೀಮಿತವಾಗಿದೆ ಎಂದರು.

ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಭಿಷೇಕ್, ಸರ್ವೇಯರ್‌ಗೆ ಪತ್ರ ಬರೆಯಲಾಗಿದೆ. ಫೋನ್ ಮಾಡಿದರೆ ರಿಸೀವ್ ಮಾಡುತ್ತಿಲ್ಲ ಎಂದು ಉತ್ತರಿಸಿದರು.

ಮಾಜಿ ಸದಸ್ಯ ವಿಶ್ವ ಮಾತನಾಡಿ, ದನ ಕರುಗಳು ಮೇಯಲು ಕಂದಾಯ ಇಲಾಖೆ ಗೋಮಾಳ ಗುರುತಿಸಿಕೊಡಬೇಕು. ಜೆಜೆಎಂ ಕಾಮಗಾರಿಯಲ್ಲಿ ತಾವಳ್ಳಿ ಕೊಕ್ಕೋಡು ಎಂಬಲ್ಲಿ ವಿದ್ಯುತ್ ಪರಿವರ್ತಕ ಇದ್ದರೂ ಸಂಪರ್ಕ ಕೊಟ್ಟಿಲ್ಲ ಎಂದರು.

ಶೆಟ್ಟಿಹಡ್ಲುವಿನಲ್ಲಿ ವಿದ್ಯುತ್ ತಂತಿ ಆಗಾಗ ತುಂಡಾಗಿ ಬೀಳುತ್ತದೆ. ವಿದ್ಯುತ್ ಪರಿವರ್ತಕವನ್ನು ಸೊಪ್ಪು ಮುಚ್ಚಿಕೊಂಡಿದೆ. ಜನ, ಜಾನುವಾರುಗಳಿಗೆ ಅಪಾಯವಿದೆ ಎಂದು ಶೆಟ್ಟಿಹಡ್ಲು ನಿವಾಸಿ ಮಹೇಶ್ ಹೇಳಿದರು. ಪಿಡಿಒ ಪದ್ಮಲತಾ ಪ್ರತಿಕ್ರಿಯಿಸಿ, ಶೇ.25ರ ಅನುದಾನದಲ್ಲಿ ಬಾವಿ ಹೂಳೆತ್ತಲು 40 ಸಾವಿರ ರೂ. ಹಂಚಿಕೆ ಮಾಡಲಾಗಿದ್ದು, ಕಾಮಗಾರಿ ನಡೆಯಬೇಕಿದೆ ಎಂದರು.

ಶೆಟ್ಟಿಹಡ್ಲು ನಿವಾಸಿ ಗಿಡ್ಡಯ್ಯ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜನರ ಓಡಾಟವಿರದ ಕಡೆ ಬಸ್ ತಂಗುದಾಣ ನಿರ್ಮಿಸಲಾಗಿದೆ. ಶೆಟ್ಟಿಹಡ್ಲು, ಅಬ್ಬಿಗುಂಡಿ, ಅಸೂಡಿ ಮುಂತಾದ ಕಡೆಗೆ ಸಂಪರ್ಕವಿರುವ ರಸ್ತೆ ಬಳಿಯೇ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಪಂಚಾಯಿತಿ ನಿರ್ಣಯ ಕೈಗೊಳ್ಳಲಾಯಿತು.

ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್ ಮಾತನಾಡಿ, ರೆಡಿಯಲಾಜಿಸ್ಟ್ ಹೊರತುಪಡಿಸಿ ಉಳಿದೆಲ್ಲ ವೈದ್ಯರು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದಾರೆ. ಮಾನಸಿಕ ರೋಗಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳ ಮೂರನೇ ಶುಕ್ರವಾರ ಕೊಪ್ಪ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಮಾಡುತ್ತಾರೆ ಎಂದರು.

ತಾಲೂಕಿನಲ್ಲಿ ಅಪ್ರಾಪ್ತರು ಗರ್ಭಿಣಿಯರಾಗುವ ಸಂಖ್ಯೆ ಹೆಚ್ಚಿದೆ. ಅಂಥರಿಗೆ ಪೋಕ್ಸೋ ಕಾಯ್ದೆ ಬಗ್ಗೆ ತಿಳಿವಳಿಕೆ ನೀಡುವ ಅವಶ್ಯಕತೆ ಇದೆ. ರೇಬಿಸ್ ತಡೆಗೆ ಎಚ್ಚರಿಕೆ ವಹಿಸಬೇಕು. ಇತ್ತೀಚೆಗೆ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಿದೆ. ಹೃದಯಾಘಾತ ಸೂಚನೆ ಕಂಡುಬಂದಲ್ಲಿ ಸೂಕ್ತ ಪರೀಕ್ಷೆ ಮಾಡಿಸಿ ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಲಭ್ಯವಿರುವ ಚುಚ್ಚುಮದ್ದು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ನೋಡಲ್ ಅಧಿಕಾರಿ ಸುನೀಲ್, ಅಧ್ಯಕ್ಷೆ ಜಯಲಕ್ಷ್ಮೀ, ಪಂಚಾಯಿತಿ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಗಣಪತಿಕಟ್ಟೆ ರವೀಂದ್ರ, ಸದಸ್ಯರಾದ ತ್ರಿಪುರೇಂದ್ರ, ಕೃಷ್ಣಪ್ಪ, ಸಂಜೋಗ್, ಮಂಗಳಾ, ಧ್ಯನ್ಯಶ್ರೀ, ರಾಜೀವಿ, ರೇಖಾ, ಸವಿತಾ, ಕೆಡಿಪಿ ಸದಸ್ಯ ರಾಜಶಂಕರ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net