ನಡವತ್ತಿಯ ನಿವೇಶನ ರಹಿತರಿಗೆ 150 ಮನೆಗಳ ನಿರ್ಮಾಣ

mla
Published on

ಶಾಸಕ ಶರತ್ ಬಚ್ಚೇಗೌಡ ಭರವಸೆ

ಹೊಸಕೋಟೆ: ನಡವತ್ತಿ ಗ್ರಾಮದಲ್ಲಿ ಹಿಂದುಳಿದ ವರ್ಗ ಹಾಗೂ ನಿವೇಶನ ರಹಿತ ಕುಟುಂಬಗಳು ಹೆಚ್ಚಾಗಿದ್ದು, ಗ್ರಾಮದ 31 ಗುಂಟೆ ಜಾಗವನ್ನು ಸ್ಲಂ ಬೋರ್ಡ್‌ಗೆ ಹಸ್ತಾಂತರ ಮಾಡಿ ಸರ್ಕಾರದಿಂದ 150 ಮನೆಗಳನ್ನು ನಿರ್ಮಾಣ ಮಾಡಲು ಅನುಮೋದನೆ ಮಾಡಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಕಸಬಾ ಹೋಬಳಿಯ ಕೊರಳೂರು, ಕೆ.ಮಲ್ಲಸಂದ್ರ ಹಾಗೂ ನಡವತ್ತಿ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 5054, ಸಮಾಜ್ ಕಲ್ಯಾಣ ಇಲಾಖೆ, ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅಡಿಯಲ್ಲಿ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ

ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಫಲಾನುಭವಿಗಳಿಗೆ ವಸತಿ ಯೋಜನೆಗಳನ್ನು ಒದಗಿಸುವ ಮೂಲಕ ಸರ್ವರಿಗೂ ಸೂರು ಒದಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.

ನಿವೇಶನ ರಹಿತರು ಸರ್ಕಾರಕ್ಕೆ ಅರ್ಜಿ ಹಾಕಿದರೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಸಮಾಜದಲ್ಲಿ

ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಗಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಸೂರು ನಿರ್ಮಿಸಿಕೊಡುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸುತ್ತದೆ ಎಂದರು.

ನ್ಯಾಯಯುತ ಹಂಚಿಕೆ: ಸ್ವಂತ ಮನೆಯೊಂದನ್ನು ಹೊಂದಬೇಕೆನ್ನುವುದು ಪ್ರತಿಯೊಬ್ಬರ ಕನಸು. ಆದರೆ ಇಂದಿನ ದುಬಾರಿ ಯುಗದಲ್ಲಿ ಈ ಕನಸನ್ನು ನನಸಾಗಿಸಿಕೊಳ್ಳುವುದು ಬಡ ಕುಟುಂಬಗಳಿಗೆ ಸವಾಲಾಗಿರುತ್ತದೆ. ಆದರೆ ರಾಜ್ಯ ಸರ್ಕಾರ ನಿವೇಶನರಹಿತರಿಗೆ ಹಾಗೂ ವಸತಿರಹಿತರಿಗೆ ಮನೆಗಳನ್ನು ಸುಲಭವಾಗಿ ವಿವಿಧ ಅನುದಾನಗಳ ಮೂಲಕ ನೀಡುವ ಯೋಜನೆ ತಂದಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ನ್ಯಾಯಯುತವಾಗಿ ಹಂಚಿಕೆ ಮಾಡಲಾಗುವುದು ಎಂದು ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜು ತಿಳಿಸಿದರು.

ಡಾ.ಸಿ.ಎನ್.ನಾರಾಯಣಸ್ವಾಮಿ, ಸದಸ್ಯರಾದ ಕೊರಳೂರು ಸುರೇಶ್, ಎಸ್‌ಎಫ್‌ಸಿಎಸ್ ನಿರ್ದೇಶಕ ರಾಜಪ್ಪ ಖರ್ಗೆ, ವೆಂಕಟೇಶಪ್ಪ , ಪ್ರಸಾದ್, ಗ್ರಾಪಂ ಸದಸ್ಯರಾದ ಮಲ್ಲಸಂದ್ರ ಮಂಜುನಾಥ್, ಅನಸೂಯ ಅರವಿಂದ್, ಭದ್ರಿ ಮಂಜುನಾಥ್, ಮುಖಂಡರಾದ ಮಲ್ಲಸಂದ್ರ ಶೇಷಪ್ಪ, ನಡವತ್ತಿ ಮುನೇಶ್, ಅವಿನಾಶ್ ಗೌಡ, ವಿಜಯ್ ಕುಮಾರ್, ಮುರಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net