ನಡತೆ ಬದಲಿಸಿಕೊಂಡು ಸತ್ಪ್ರಜೆಗಳಾಗಿ, ಡಿವೈಎಸ್‌ಪಿ ರಂಗಪ್ಪ ಕಿವಿಮಾತು, ವಿಜಯಪುರದಲ್ಲಿ ರೌಡಿ ಶೀಟರ್‌ಗಳ ಪರೇಡ್

24-vij-3b-rowady pered
Published on

ವಿಜಯಪುರ: ಆಕಸ್ಮಿಕ ಘಟನೆಗಳಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು, ಅಪರಾಧಿಗಳಾಗಿ ರೌಡಿ ಪಟ್ಟ ಹೊಂದಿರುವವರು ಸಮಾಜದಲ್ಲಿ ಉತ್ತಮ ನಡವಳಿಕೆ ಹೊಂದುವ ಮೂಲಕ ರೌಡಿ ಪಟ್ಟದಿಂದ ಹೊರಬರಬೇಕು ಎಂದು ದೊಡ್ಡಬಳ್ಳಾಪುರ ಡಿವೈಎಸ್‌ಪಿ ಟಿ. ರಂಗಪ್ಪ ತಿಳಿಸಿದರು.

ನಗರದ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚನ್ನರಾಯಪಟ್ಟಣ ಹಾಗೂ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಪರೇಡ್‌ನಲ್ಲಿ ಮಾತನಾಡಿದರು.

ರೌಡಿ ಪಟ್ಟಿಯಲ್ಲಿರುವವರನ್ನು ಸಮಾಜ ಘಾತುಕ ಶಕ್ತಿಗಳು, ಇನ್ನಿತರೆ ಅಪರಾಧಿ ಕೃತ್ಯಗಳಿಗೆ ಪ್ರಚೋಧಿಸುವ ಸಂಭವ ಹೆಚ್ಚಾಗಿದ್ದು, ಅಂತಹ ಸೂಚನೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರೌಡಿ ಪಟ್ಟಿ ಸೇರಿರುವವರು ಮತ್ತೆ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿಕೊಂಡಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಪೊಲೀಸರು ಸದಾ ರೌಡಿಶೀಟರ‌್ಗಳ ಮೇಲೆ ನಿಗಾ ವಹಿಸಿದ್ದು, ಅವರ ನಡವಳಿಕೆ ಅನುಸಾರ ರೌಡಿ ಪಟ್ಟಿಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯಪುರ ಪೊಲೀಸ್ ವೃತ್ತ ನಿರೀಕ್ಷಕ ಎಸ್. ಮಲ್ಲಿಕಾರ್ಜುನ್ ಮಾತನಾಡಿ, ರೌಡಿ ಪಟ್ಟಿಯಲ್ಲಿರುವವರು ಪ್ರಮುಖವಾಗಿ ಮದ್ಯಪಾನ ವರ್ಜಿಸಬೇಕು. ಇದರಿಂದ ಅಪರಾಧ ಕೃತ್ಯಗಳಿಂದ ಹೊರಬರಲು ಸಾಧ್ಯ ಎಂದರು.

ವಿಜಯಪುರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಡಿ. ಮಂಜುನಾಥ್, ಚನ್ನರಾಯಪಟ್ಟಣ ಸಬ್‌ಇನ್‌ಸ್ಪೆಕ್ಟರ್ ಹೊನ್ನೇಗೌಡ, ಮುಖ್ಯಪೇದೆಗಳಾದ ಎಚ್. ಚಂದ್ರು, ಡಿ. ಗೋಪಾಲಕೃಷ್ಣ, ಕೃಷ್ಣನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net