ನಟ ದರ್ಶನ್‌ಗೆ ಸರ್ಜಿಕಲ್ ಚೇರ್

02 yerriswamy 05
Published on

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ವೈದ್ಯಕೀಯ ತಪಾಸಣೆ ವರದಿ ಆಧಾರಿಸಿ ಜೈಲು ಸಿಬ್ಬಂದಿ ಸರ್ಜಿಕಲ್ ಚೇರ್‌ಗೆ ಸೋಮವಾರ ಅನುಮತಿ ನೀಡಿತು.
ನಗರದ ಕೇಂದ್ರ ಕಾರಾಗೃಹಕ್ಕೆ ಇತ್ತೀಚೆಗೆ ಕಾರಾಗೃಹ ಇಲಾಖೆಯ ಉತ್ತರ ವಲಯದ ಡಿಐಜಿ ಟಿ.ಪಿ. ಶೇಷ ಅವರು ಭೇಟಿ ನೀಡಿದ ವೇಳೆ, ದರ್ಶನ್ ಅವರು ಬೆನ್ನಲುಬು ಸಮಸ್ಯೆಯಿದ್ದು, ಶೌಚಕ್ಕೆ ಸರ್ಜಿಕಲ್ ಚೇರ್ ನೀಡುವಂತೆ ಮನವಿ ಮಾಡಿದ್ದರು. ಅಲ್ಲದೆ, ಪತ್ನಿ ವಿಜಯಲಕ್ಷ್ಮಿ ವಕೀಲರೊಂದಿಗೆ ಜೈಲಿಗೆ ಭೇಟಿ ನೀಡಿ ಬೆನ್ನಲುಬು ಸಮಸ್ಯೆಯ ವೈದ್ಯಕೀಯ ದಾಖಲೆಗಳನ್ನು ನೀಡಿದ್ದರು. ಆದ್ದರಿಂದ, ಕುಟುಂಬ ಸದಸ್ಯರ ವೈದ್ಯಕೀಯ ದಾಖಲೆಗಳು ಹಾಗೂ ಸ್ಥಳೀಯ ವೈದ್ಯರು ನೀಡಿದ ವರದಿ ಅನ್ವಯ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಇಲಾಖೆಯಿಂದ ಸರ್ಜಿಕಲ್ ಚೇರ್ ನೀಡಲಾಗಿದೆ. ದರ್ಶನ್ ಬೇಡಿಕೆಯಂತೆ ಕಳೆದ ಎರಡು ದಿನಗಳ ಬಳಿಕ ಸೋಮವಾರ ಸಂಜೆ ಚೇರ್ ಜೈಲಿಗೆ ತಲುಪಿತು. ಜೈಲಿನ ಭದ್ರತಾ ಕೊಠಡಿಯಲ್ಲಿ ಸಿಬ್ಬಂದಿ ತಪಾಸಣೆ ನಡೆಸಿ, ನೊಂದಾಣಿ ಪುಸ್ತಕದಲ್ಲಿ ನಮೂದಿಸಿಕೊಂಡು ದರ್ಶನ್ ಇರುವ ಹೈ ಸೆಕ್ಯೂರಿಟಿ ಸೆಲ್‌ಗೆ ಕಳುಹಿಸಲಾಯಿತು.

ಬಾಕ್ಸ್ : ಕಳೆದ ಕೆಲ ದಿನಗಳಿಂದ ಜೈಲಿನಲ್ಲಿರುವ ನಟ ದರ್ಶನ್ ಅವರ ಚಲವನದ ವೀಡಿಯೋವನ್ನು ಜೈಲು ಸಿಬ್ಬಂದಿ ಪ್ರತ್ಯೇಕವಾಗಿ ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಲಾಗಿದೆ. ಬೆಂಗಳೂರಿನ ಪರಪ್ಪನ್ ಆಗ್ರಹಾರದಲ್ಲಿ ವಿಶೇಷ ಅತಿಥ್ಯ ನೀಡಿದ ಹಿನ್ನಲೆ ವಿವಾದಕ್ಕೆ ಕಾರಣವಾಗಿತ್ತು. ಆದ್ದರಿಂದ, ದರ್ಶನ್ ಕಾವಲಿಗೆ ಮೂರು ಸಿಸಿ ಕ್ಯಾಮೆರಾ ಮತ್ತು ಭದ್ರತಾ ಸಿಬ್ಬಂದಿಯ ಎರಡು ಬಾಡಿವೋರ್ನ್ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಲಾಗುತ್ತಿದೆ. ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ ವೀಡಿಯೋವನ್ನು ಸಹ ಸಂಗ್ರಹಿಸಲಾಗಿದೆ. ದರ್ಶನ್ ಜೈಲಿನಲ್ಲಿ ಇರುವವರೆಗೂ ಯಾವುದೇ ವೀಡಿಯೋ ಮಿಸ್ ಆಗುವಂತಿಲ್ಲ. ಅದಕ್ಕೆ ಎಷ್ಟು ಹಾರ್ಡ್ ಡಿಸ್ಕ್ ಅಗತ್ಯವಿದೆ ಅಷ್ಟು ಖರೀದಿಸಿ ಎಂದು ಮೇಲಾಧಿಕಾರಿಗಳು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಮೊದಲ ದಿನಕ್ಕಿಂತ ಸದ್ಯ ಜೈಲಿನಲ್ಲಿ ದರ್ಶನ್ ಹೊಂದಿಕೊಂಡಿದ್ದಾರೆ. ಆದರೆ, ಅವರಿಗೆ ಏಕಾಂಗಿತನ ಕಾಡುತ್ತಿದೆ. ಆದ್ದರಿಂದ, ಬೆಳ್ಳಗೆ ಬ್ಯಾರಕ್ ಮುಂಭಾಗದಲ್ಲಿಯೇ ಕೆಲ ಕಾಲ ವಾಕ್ ಮಾಡಿ ವಿಶ್ರಾಂತಿ ಪಡೆದರು ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net