

ತಿ.ನರಸೀಪುರ: ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ವರುಣ ಕ್ಷೇತ್ರದ ಕೆಂಪಯ್ಯನಹುಂಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಮತಯಾಚಿಸಿದರು.
ತೆರೆದ ವಾಹನದಲ್ಲಿ ಗ್ರಾಮದ ಮುಖಂಡರೊಂದಿಗೆ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದ ನವರಸ ನಾಯಕ ಜಗ್ಗೇಶ್ ಅಭಿವೃದ್ಧಿಯ ಪರವಾದ ವಿ.ಸೋಮಣ್ಣ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಮತಯಾಚನೆಗೆ ಗ್ರಾಮಕ್ಕೆ ಆಗಮಿಸಿದ ಜಗ್ಗೇಶ್ ಅವರಿಗೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಹೂವಿನಹಾರ ಹಾಕಿ ಸ್ವಾಗತ ಕೋರಿದರು.
ರೋಡ್ ಶೋ ನಡೆಸಿದ ಜಗ್ಗೇಶ್ ಗ್ರಾಮದ ಪ್ರತಿ ಬೀದಿ, ಬೀದಿಗೆ ತೆರಳಿ ಮತಯಾಚನೆಯಲ್ಲಿ ತೊಡಗಿದರು. ಈ ವೇಳೆ ಮಾತನಾಡಿ, ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಅವರ ಸಂದೇಶಗಳನ್ನು ನಿಮಗೆ ತಲುಪಿಸಲು ಬಂದಿದ್ದೇನೆ. ಅವರು ದೇಶದೆಲ್ಲೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗದ ಕಾರಣಕ್ಕೆ ಕೆಲವೊಂದು ಕ್ಷೇತ್ರಕ್ಕೆ ನಮಗೆ ಜವಾಬ್ದಾರಿ ನೀಡಿದ್ದಾರೆ. ವರುಣ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯ ಚುನಾವಣೆಯಲ್ಲಿ ಸರಿಯಾದ ಹೋರಾಟ ಮಾಡದ ಹಿನ್ನೆಲೆಯಲ್ಲಿ ಏಕಮೇವವಾಗಿ ಇತಿಹಾಸ ನಿರ್ಮಾಣವಾಗಿರಬಹುದು. ಆದರೆ ಈಗ 6 ಬಾರಿಗೆ ಶಾಸಕರಾಗಿ ಅಭಿವೃದ್ಧಿ ಹರಿಕಾರರಾಗಿರುವ ವಿ.ಸೋಮಣ್ಣ ಅವರನ್ನು ನಿಮ್ಮೊಂದಿಗೆ ಕೆಲಸ ಮಾಡಲು ಮೋದಿ ಕಳುಹಿಸಿಕೊಟ್ಟಿದ್ದಾರೆ ಎಂದರು.
ಸಚಿವರಾಗಿ ಸೋಮಣ್ಣ ಗೊವಿಂದರಾಜನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಿದ್ದಾರೆ. ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯ ಮಟ್ಟದಲ್ಲಿ ಇವೆ. ರಾಜ್ಯದ ಯಾವುದೇ ಗ್ರಾಮದಲ್ಲಿ ಬಡವರು ಸ್ವಂತ ಮನೆ ಮಾಡಿಕೊಂಡಿದ್ದಾರೆಂದರೆ ಅದು ಸೋಮಣ್ಣನವರು ವಸತಿ ಸಚಿವರಾಗಿ ನೀಡಿದ್ದ 5 ಲಕ್ಷ ಮನೆಗಳು ಕಾರಣ. ಗೋವಿಂದರಾಜ ಕ್ಷೇತ್ರವನ್ನು ಅದ್ಭುತವಾಗಿ ಇಟ್ಟುಕೊಂಡಿರುವ ಸೋಮಣ್ಣ ಅವರು ವರುಣ ಕ್ಷೇತ್ರವನ್ನು ಅದೇ ಮಾದರಿಯಲ್ಲಿ ಮಾಡುವ ಹೆಬ್ಬಯಕೆ ಹೊಂದಿದ್ದಾರೆ ಎಂದರು.
ಮೋದಿ ಅವರು ಸೋಮಣ್ಣ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಕ್ಷೇತ್ರದ ಜನತೆ ಪ್ರಜ್ಞಾವಂತರಾಗಿದ್ದೀರಿ. ಸೋಮಣ್ಣ ಅವರನ್ನು ಬೆಂಬಲಿಸಿ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೆನ್ನಂಬಳ್ಳಿ ಮಂಜು, ಅಂದಾನಿ ಗೌಡ, ಕೇಬಲ್ ಪಾಪು, ಕೆಂಪೇಗೌಡ, ಸಂತೋಷ, ಕೀರ್ತಿ, ಶಿವಕುಮಾರ್, ಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಬಾಬು, ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಾಮ್ರಾಟ್ ಸುಂದರೇಶನ್, ಎಸ್‌ಎಂಪಿ ಡೆವಲಪರ್ ಪ್ರಕಾಶ್, ಶ್ರೀಕಂಠ, ಮಹೇಶ್ ಮತ್ತಿತರರಿದ್ದರು.