ನಟ ಗಣೇಶ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Actor Ganesh
ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಸಮೀಪ ಗಣೇಶ್ ತಮ್ಮ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿರುವುದು.
Published on

ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ವಲಯದಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸುವ ಮೂಲಕ ಜಕ್ಕಳ್ಳಿಯ ತನ್ನ ಜಮೀನಿನಲ್ಲಿ ಬೃಹತ್ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ಪ್ರಯತ್ನಕ್ಕೆ ತಣ್ಣೀರೆರಚಿದೆ.

ಎರಡು ವರ್ಷಗಳ ಹಿಂದೆ ತಾಲೂಕಿನ ಹಂಗಳ ಹೋಬಳಿ ಜಕ್ಕಳ್ಳಿಯ ಸ.ನಂ. 105 ರಲ್ಲಿ 1 ಎಕರೆ 24 ಗುಂಟೆ ಜಮೀನನ್ನು ಖರೀದಿಸಿದ್ದ ಗಣೇಶ್ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕೈಗೊಳ್ಳಲು ಅವಕಾಶವಿಲ್ಲದಿದ್ದರೂ ಗಣೇಶ್ ಕಣಿಯನಪುರ ಆನೆ ಕಾರಿಡಾರ್ ಪ್ರದೇಶದಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದ ಬಗ್ಗೆ ಪರಿಸರವಾದಿಗಳು ತೀವ್ರ ಆಕ್ರೋಶವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಮಗಾರಿ ನಿಲ್ಲಿಸುವಂತೆ ನೋಟಿಸ್ ನೀಡಿತ್ತು.

ಅರಣ್ಯ ಇಲಾಖೆ ನೀಡಿದ್ದ ನೋಟಿಸ್ ಪ್ರಶ್ನಿಸಿ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಕೂಲಂಕಶವಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ಅವರಿದ್ದ ನ್ಯಾಯಪೀಠ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ತಾತ್ಕಾಲಿಕ ವಾಸದ ಮನೆ ನಿರ್ಮಾಣಕ್ಕೆ ಮಾತ್ರ ಅವಕಾಶವಿದೆ. ಇದರ ಜತೆಗೆ, ಯಾವುದೇ ಬೃಹತ್ ಮತ್ತು ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗದು ಎಂದು ಸ್ಪಷ್ಟವಾಗಿ ತಿಳಿಸಿದೆ.

ಅರಣ್ಯ ಇಲಾಖೆ ನೀಡಿರುವ ನೋಟಿಸ್‌ಗೆ ಅರ್ಜಿದಾರ ಗಣೇಶ್ ಮುಂದಿನ ಒಂದು ವಾರದಲ್ಲಿ ಉತ್ತರ ನೀಡಬೇಕು. ಈ ಉತ್ತರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಿನ ನಾಲ್ಕು ವಾರಗಳಲ್ಲಿ ಪರಿಶೀಲನೆ ನಡೆಸಿ ವಿಚಾರಣೆ ಪೂರ್ಣ ಗೊಳಿಸಬೇಕು ಎಂದು ಸಹ ಸೂಚನೆ ನೀಡಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನಟ ಗಣೇಶ್ ತಮ್ಮಲ್ಲಿರುವ ದಾಖಲಾತಿಗಳನ್ನು ಹಿರಿಯ ಅಧಿಕಾರಿಗಳ ಮುಂದೆ ಮಂಡಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಎಲ್ಲವನ್ನೂ ಪರಿಶೀಲಿಸಿದ ನಂತರ ಅಧಿಕಾರಿಗಳು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.
ಡಾ.ರಮೆಶ್‌ಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net