

ಜಗಳೂರು: ನಟ ಉಪೇಂದ್ರ ಅವರ ವಿವಾದಾತ್ಮಕ ಹೇಳಿಕೆ ಖಂಡಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್-2ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ತಮ್ಮ ಫೇಸ್‌ಬುಕ್ ಲೈವ್ ವಿಡಿಯೋದಲ್ಲಿ ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ ಎಂದು ಹೇಳಿಕೆ ನೀಡಿ ದಲಿತರನ್ನು ಕಡೆಗಣಿಸಿ ಅವಮಾನ ಮಾಡಿದ್ದಾರೆ. ಇವರೊಬ್ಬ ಬುದ್ಧ್ದಿವಂತ ನಟರೆನಿಸಿಕೊಂಡು ಈ ರೀತಿಯಾಗಿ ಮಾತನಾಡಿರುವುದು ಎಷ್ಟು ಸರಿ? ಆ.12ಕ್ಕೆ ಪ್ರಜಾಕೀಯ ಪಕ್ಷ ಹುಟ್ಟಿಕೊಂಡು 6 ವರ್ಷಗಳ ಸಂಭ್ರಮದಲ್ಲಿದ್ದ ಉಪೇಂದ್ರ ಸಾಮಾಜಿಕ ಜಾಲತಾಣ ಮೂಲಕ ದಲಿತರಿಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಪ್ರಚಾರಕ್ಕಾಗಿ ಮತ್ತೊಂದು ಸಮುದಾಯವನ್ನು ಬಳಸಿಕೊಂಡು ತುಂಬ ನೋವುಂಟು ಮಾಡಿದ್ದಾರೆ. ಸಮಾಜದಲ್ಲಿ ಸಾಮರಸ್ಯದ ಬದುಕನ್ನು ಹಾಳು ಮಾಡಿದ್ದಾರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಉಪೇಂದ್ರ ನಟನೆಯ ಚಿತ್ರಗಳನ್ನು ದಲಿತರು ವೀಕ್ಷಣೆ ಮಾಡಿ ಪ್ರೋತ್ಸಾಹಿಸಿದ್ದಾರೆ. ಸಾಕಷ್ಟು ಜನರು ಅಭಿಮಾನಿಗಳಿದ್ದಾರೆ. ಹೀಗಿದ್ದ ಮೇಲೆ ದಲಿತರನ್ನು ಹೊಲೆಗೇರಿಗೆ ಹೋಲಿಸಿ ಜಾತಿ ಜಾತೀಯತೆ ಎತ್ತಿ ತೋರಿಸುವ ಮೂಲಕ ದಲಿತರನ್ನು ಕೆರಳುವಂತೆ ಮಾಡಿದ್ದಾರೆ. ಅವರಿಗೆ ಕಾನೂನಿನ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ಕುಬೇಂದ್ರಪ್ಪ, ಪೂಜಾರಿ ಸಿದ್ದಪ್ಪ, ಗೋಡೆ ದುರುಗಪ್ಪ, ಎನ್, ಹನುಮಂತಪ್ಪ, ಬಸವರಾಜ್, ಗೌರಮ್ಮನಹಳ್ಳಿ ವೆಂಕಟೇಶ್, ನೀಲಪ್ಪ, ತೋರಣಗಟ್ಟೆ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರಿದ್ದರು.