

ಯಾದಗಿರಿ: ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ ಎಂದು ನಗರಸಭೆ ನೂತನ ಅಧ್ಯಕ್ಷ ವಿಲಾಸ್ ಪಾಟೀಲ್ ತಿಳಿಸಿದರು.
ಸೋಮವಾರ ಇಲ್ಲಿನ ನಗರಸಭೆ ಕಚೇರಿಯಲ್ಲಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಹಾಗೂ ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಗರಸಭೆ ಸದಸ್ಯರ ಚುನಾವಣೆ ನಡೆದ ಎರಡು ವರ್ಷಗಳ ನಂತರ ಅಧಿಕಾರ ಸಿಕ್ಕಿದೆ. ಈ ವೇಳೆ ನಗರದ ಅಭಿವೃದ್ಧಿಗೆ ಸಾಕಷ್ಟು ಕುಂಠಿತವಾಗಿದ್ದು, ಅದನ್ನು ಸರಿಪಡಿಸಲಾಗುವುದು ಎಂದರು.
ನಮ್ಮ ಶಾಸಕರು ಪಕ್ಷದ ಮುಖಂಡರು ಮತ್ತು ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ್ದಾರೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಡಾವಣೆಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಆಗುವಂತೆ ಆಡಳಿತದಲ್ಲಿ ಪಾತದರ್ಶಕತೆ ತರಲು ಪ್ರಯತ್ನಿಸುವೆ ಎಂದು ಹೇಳಿದರು.
ನೂತನ ಉಪಾಧ್ಯಕ್ಷೆ ಪ್ರಭಾವತಿ ಕಲಾಲ, ಮುಖಂಡರಾದ ಮಲ್ಲನಗೌಡ ಪಾಟೀಲ್ ಹತ್ತಿಕುಣಿ, ಖಂಡಪ್ಪ ದಾಸನ್, ಮಹಾದೇವಪ್ಪ ಯಲಸತ್ತಿ, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಸದಸ್ಯರಾದ ಸುರೇಶ ಅಂಬಿಗೇರ, ಅಸ್ಸರ ಚಾವುಸ್, ಸ್ವಾಮಿದೆವ ದಾಸನಕೇರಿ, ಅಂಬಯ್ಯ ಶಾಬಾದಿ, ಚಂದ್ರಕಾಂತ ಮಡ್ಡಿ, ಮಾರುತಿ ಕಲಾಲ, ಕೃಷ್ಣಾ ನಾಯಕ ನಾನೇಕ, ಮಹೇಶ್ ಕುರಕುಂಬಳ, ಮಹಮ್ಮದ್ ವಹಾಬ, ಶಕುಂತಲಾ, ಸುನಿತಾ ಚವ್ಹಾಣ್, ವೀಣಾ ಮೋದಿ, ರಮಾದೇವಿ ಕವಲಿ, ಸುರೇಶ್ ಮಡ್ಡಿ ಇದ್ದರು.