ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಚಂದ್ರಶೇಖರ್ ನೇಮಕ

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಚಂದ್ರಶೇಖರ್ ನೇಮಕ
Published on

ಹಾಸನ : ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಆಯುಕ್ತರಾಗಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಮೇಶ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಇವರ ಜಾಗಕ್ಕೆ ಚಂದ್ರಶೇಖರ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ನೂತನ ಆಯುಕ್ತರು ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು.

ರಮೇಶ್ ಅವರನ್ನು ತುಮಕೂರು ಜಿಲ್ಲೆಯ ಲೋಕಪಯೋಗಿ ಇಲಾಖೆಯ ಅಭಿಯಂತರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಇವರ ಜಾಗಕ್ಕೆ ಈ ಹಿಂದೆ ಜಿಲ್ಲೆಯಲ್ಲಿ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚಂದ್ರಶೇಖರ್ ಅವರನ್ನ ನೇಮಿಸಿದೆ. ಹುಡಾ ಆಯುಕ್ತರಾಗಿ ಜಿಲ್ಲೆಯಲ್ಲಿ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ರಮೇಶ್ ನಗರದ ಹಲವು ಬಡಾವಣೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಎಸ್.ಎಂ. ಕೃಷ್ಣ ಬಡಾವಣೆ ಇಡೀ ರಾಜ್ಯ ಮತ್ತು ದೇಶದಲ್ಲಿ ಮಾದರಿ ಬಡಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಇದಕ್ಕೂ ಇವರು ಸಾಕಷ್ಟು ಶ್ರಮ ವಹಿಸಿದ್ದರು. ರಮೇಶ್ ಅವರು ಜಿಲ್ಲೆಯಲ್ಲಿ 12 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ಇವರನ್ನು ವರ್ಗಾವಣೆ ಮಾಡುತ್ತಿಲ್ಲ ಎಂಬ ಅಪವಾದಗಳು ಕೂಡ ಪದೇಪದೆ ಕೇಳಿ ಬರುತ್ತಿತ್ತು. ಇದೀಗ ಅವರನ್ನು ವರ್ಗಾವಣೆ ಮಾಡಲಾಗಿದೆ.

ಚಂದ್ರಶೇಖರ್ ಈ ಹಿಂದೆ ಜಿಲ್ಲೆಯಲ್ಲಿ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ವರ್ಗಾವಣೆ ಮಾಡಲಾಗಿತ್ತು. ಈಗ ಇವರನ್ನು ಹುಡಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ನಗರದಲ್ಲಿ ನಡೆಯುತ್ತಿರುವಂತಹ ಹಲವು ಯೋಜನೆಗಳನ್ನು ಕಾನೂನುಬದ್ಧವಾಗಿ ನಿರ್ವಹಿಸಬೇಕಾಗಿದೆ. ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವು ಗುರುತರ ಆರೋಪಗಳು ಕೇಳಿ ಬಂದಿದ್ದವು. ಅವೆಲ್ಲದಕ್ಕೂ ಉತ್ತರಿಸಬೇಕಾಗಿದೆ. ಅಲ್ಲದೆ ಮುಂದೆ ನಗರದ ಅಭಿವೃದ್ಧಿ ದೃಷ್ಟಿಯಿಂದ ಯಾವೆಲ್ಲ ಯೋಜನೆಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net