

ಹಾಸನ: ನಗರದ ಎನ್.ಆರ್.ವೃತ್ತ ಸೇರಿ ವಿವಿಧೆಡೆ ಬಿ.ಎಂ.ರಸ್ತೆ ಉದ್ದಕ್ಕೂ ಫುಟ್‌ಪಾತ್, ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ಹೋಟೆಲ್, ಪೆಟ್ಟಿಗೆ ಅಂಗಡಿ, ತಳ್ಳುವ ಗಾಡಿಗಳನ್ನು ನಗರಸಭೆ ವತಿಯಿಂದ ಬುಧವಾರ ತೆರವುಗೊಳಿಸಲಾಯಿತು.
ನಗರಸಭೆ ಆಯುಕ್ತ ಟಿ.ಎನ್.ನರಸಿಂಹ ಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಸಿಬ್ಬಂದಿ, ಫುಟ್‌ಪಾತ್ ಮೇಲಿದ್ದ ಪೆಟ್ಟಿಗೆ ಅಂಗಡಿ, ಕಬ್ಬಿನ ಜ್ಯೂಸ್ ಗಾಡಿ, ತಳ್ಳೋಗಾಡಿ, ಪಾದಚಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿದ್ದ ಹೋಟೆಲ್‌ಗಳು, ನಾಮಫಲಕಗಳನ್ನು ತೆರವುಗೊಳಿಸಿದರು. ಜೊತೆಗೆ ಪ್ರವಾಸಿ ಮಂದಿರ ಆವರಣದಲ್ಲಿ ಅನಗತ್ಯವಾಗಿ ಬೆಳೆದಿದ್ದ ಗಿಡ, ಬಳ್ಳಿಯನ್ನು ತೆಗೆದು ಸ್ವಚ್ಛಗೊಳಿಸಲಾಯಿತು.
ನಂತರ ಮಾತನಾಡಿದ ಆಯುಕ್ತರು, ಹಾಸನಾಂಬ ಉತ್ಸವದ ಹಿನ್ನಲೆ ನಗರದ ಸೌಂದರ್ಯ, ಸಂಚಾರಕ್ಕೆ ಅಡ್ಡಿಯುಂಟು ಮಾಡಲು ವಿವಿಧೆಡೆ ಅಕ್ರಮವಾಗಿ ಹಾಕಿರುವ ಬಂಟಿಂಗ್ಸ್, ಬ್ಯಾನರ್‌ಗಳನ್ನು ತೆರಗೊಳಿಸುವುದರ ಜೊತೆಗೆ ಫುಟ್‌ಪಾತ್ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗುತ್ತಿದೆ. ಪೆಟ್ಟಿಗೆ ಅಂಗಡಿಗಳನ್ನು ಖಾಲಿ ಮಾಡುವಂತೆ ಈ ಹಿಂದೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿತ್ತು ಆದರೂ ಎಚ್ಚೆತ್ತುಕೊಳ್ಳದೆ ನಿರ್ಲಕ್ಷೃ ತೋರಿದ ಹಿನ್ನಲೆ ಇಂದು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆಯನ್ನು ಎನ್.ಆರ್.ವೃತ್ತದ ಮೂಲಕ ಆರಂಭಿಸಿದ್ದು, ಬಿ.ಎಂ.ರಸ್ತೆ ಉದ್ದಕ್ಕೂ ಮುಂದುರೆಯಲಿದೆ ಎಂದು ತಿಳಿಸಿದರು.
ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಚನ್ನೇಗೌಡ, ಕೆ.ಆರ್.ವೆಂಕಟೇಶ್, ಆರೋಗ್ಯ ನಿರೀಕ್ಷಕ ದೀಪಕ್, ಪರುಶುರಾಮ್ ಮತ್ತಿತರರು ಹಾಜರಿದ್ದರು.