

ಹಾಸನ: ಹಾಸನಂಬ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ತಣ್ಣೀರು ಹಳ್ಳದಿಂದ ಗುಹೆ ಕಲ್ಲಮ್ಮ ದೇವಸ್ಥಾನದವರೆಗೂ ಫುತ್‌ಪಾತ್ ಮೇಲೆ ನಿರ್ಮಿಸಿಕೊಂಡಿರುವ ಅಂಗಡಿಗಳನ್ನು ಬುಧವಾರ ಬೆಳ್ಳಂಬೆಳಗ್ಗೆಯೇ ನಗರಸಭೆ ಅಧಿಕಾರಿಗಳು ಜೆಸಿಬಿ ಮೂಲಕ ನೂರಾರು ಅಂಗಡಿಗಳನ್ನು ಕೆಡವಿ ಹಾಕಲಾಯಿತು. ನೋಟಿಸ್ ಸಹ ನೀಡದೆ ಏಕಾಏಕಿ ಅಂಗಡಿ ಕೆಡವಿದ್ದಕ್ಕೆ ರೊಚ್ಚಿಗೆದ್ದ ವ್ಯಾಪಾರಸ್ಥರು ಸ್ಥಳದಲ್ಲಿಯೇ ಪ್ರತಿಭಟನೆ ಆರಂಭಿಸಿದರು. ಆಗ ಶಾಸಕ ಸ್ವರೂಪ್ ಪ್ರಕಾಶ್ ಸ್ಥಳಕ್ಕೆ ಬಂದು ನಗರಸಭೆ ಆಯುಕ್ತರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದರು ಆಯುಕ್ತರು ಅತ್ತ ಕಾಲೇ ಹಾಕಲಿಲ್ಲ. ಆಗ ಶಾಸಕರು ವ್ಯಾಪಾರಸ್ಥರೊಂದಿಗೆ ಪ್ರತಿಭಟನೆಗೆ ಇಳಿದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಗರಸಭೆ ಆಯುಕ್ತ ನರಸಿಂಹಮೂರ್ತಿ, ತಹಸೀಲ್ದಾರ್ ಶ್ವೇತಾ ಹಾಗೂ ಇನ್ನಿತರೆ ಅಧಿಕಾರಿಗಳ ನೇತೃತ್ವದಲ್ಲಿ ಯಾವುದೇ ನೋಟಿಸ್ ನೀಡದೆ ಬೆಳಗ್ಗೆ ಏಕಾಏಕಿ ತಣ್ಣೀರು ಹಳ್ಳ ವೃತದಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತಡೆಯಲು ಮುಂದಾದರು. ಆದರೆ ಪೊಲೀಸರ ನೆರವಿನಿಂದ ತೆರವು ಕಾರ್ಯಾಚರಣೆ ಮುಂದುವರಿಸಿದ್ದರು.
ವಿಚಾರ ತಿಳಿದ ತಕ್ಷಣ ಶಾಸಕ ಎಚ್.ಪಿ. ಸ್ವರೂಪ್ ಮತ್ತು ನಗರಸಭೆ ಅಧ್ಯಕ್ಷ ಎಂ ಚಂದ್ರೇಗೌಡ ಹಾಗೂ ಸದಸ್ಯರು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ನಮ್ಮ ಗಮನಕ್ಕೆ ತಾರದೆ ಆಯುಕ್ತರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಆಯುಕ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸದಸ್ಯರು, ಅಧ್ಯಕ್ಷರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಡಳಿತ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತೆರವು ಕಾರ್ಯಾಚರಣೆ ನಡೆಸುತ್ತಿರುವ ಸ್ಥಳಕ್ಕೆ ತೆರಳಿದರು. ಅಷ್ಟೋತ್ತಿಗಾಗಲೇ ನಗರಸಭೆ ಆಯುಕ್ತರು, ಅಧಿಕಾರಿಗಳು ಸ್ಥಳ ಖಾಲಿ ಮಾಡಿದ್ದರು. ಶಾಸಕರು ಸ್ಥಳಕ್ಕೆ ಹೋಗುತ್ತಿದ್ದಂತೆ ಸಾರ್ವಜನಿಕರು ಕಣ್ಣೀರು ಹಾಕುತ್ತಾ ‘ಯಾವುದೇ ಸೂಚನೆ ಮತ್ತು ನೋಟಿಸ್ ನೀಡದೆ ಏಕಾಏಕಿ ಈ ರೀತಿ ಮಾಡಿದ್ದಾರೆ. ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ,’ ಎಂದು ಅಳಲು ತೋಡಿಕೊಂಡರು.
ನಂತರ ಶಾಸಕರು ನಗರಸಭೆ ಆಯುಕ್ತರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದರು. ಆದರೆ ಎರಡು ಗಂಟೆಯಾದರೂ ಕೂಡ ಆಯುಕ್ತರು ಶಾಸಕರ ಮಾತಿಗೆ ಬೆಲೆ ಕೊಡದೆ ಸ್ಥಳಕ್ಕೆ ಆಗಮಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ರಸ್ತೆ ಬಂದ್ ಮಾಡುವ ಮೂಲಕ ಆಕ್ರೋಶ ಹೂರ ಹಾಕಿದರು.
ಸ್ಥಳಕ್ಕೆ ಪೊಲೀಸರು ಆಗಮಿಸಿ ರಸ್ತೆ ಬಂದ್ ಮಾಡದಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಲ ಸಮಯ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ವಾಗ್ವಾದ ನಡೆಯಿತು. ಶಾಸಕರು ಹಠ ಬಿಡದೆ ನಗರಸಭೆ ಆಯುಕ್ತರು ಬರುವವರೆಗೂ ಸ್ಥಳದಲ್ಲೇ ಕಾಯುತ್ತೇನೆ ಎಂದು ಪಟ್ಟು ಹಿಡಿದು ಧರಣಿ ನಡೆಸಿದರು. ಆದರೂ ಆಯುಕ್ತರು ಆಗಮಿಸಲಿಲ್ಲ.
ಈ ಸಂದರ್ಭದಲ್ಲಿ ಹಾಸನ ಸಕಲೇಶಪುರ ಮಾರ್ಗದ ರಸ್ತೆಯನ್ನು ಬಂದ್ ಮಾಡಲಾಯಿತು. ಕೆಲ ಸಮಯ ವಾಹನ ಸಂಚಾರಕ್ಕೆ ಆಡಚಣೆ ಉಂಟಾಯಿತು. ನಂತರ ಪ್ರತಿಭಟನಾಕಾರರು ಟಯರ್‌ಗೆ ಬೆಂಕಿ ಹಚ್ಚಿ ಜಿಲ್ಲಾಧಿಕಾರಿ, ಆಯುಕ್ತರು ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಶಾಸಕರನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಜಗ್ಗದೆ ಆಯುಕ್ತರು ಸ್ಥಳಕ್ಕೆ ಆಗಮಿಸುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯ ಎಚ್ಚರಿಕೆ
ಹಾಸನಂಬ ಜಾತ್ರಾ ಮಹೋತ್ಸವದ ಹೆಸರಿನಲ್ಲಿ ಬಡವರ ಮೇಲೆ ದೌರ್ಜನ್ಯ ನಡೆಸಿ ನಗರಸಭೆ ಆಯುಕ್ತರು ನಗರಸಭೆ ಸದಸ್ಯರು ಮತ್ತು ಅಧ್ಯಕ್ಷರು, ಶಾಸಕರ ಗಮನಕ್ಕೆ ತರದೆ ಏಕಾಏಕಿ ಅಂಗಡಿಗಳ ತೆರವು ಮಾಡಿರುವುದನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಗರಸಭಾ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಎಚ್ಚರಿಸಿದರು.
ಶಾಸಕರ ಕರೆಗೂ ಕ್ಯಾರೆ ಎನ್ನದ ಆಯುಕ್ತರು
ತೆರವು ಕಾರ್ಯಾಚರಣೆ ಸಂಬಂಧ ಶಾಸಕ ಸ್ವರೂಪ್ ಅವರು ನಗರಸಭೆ ಆಯುಕ್ತರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದರು. ಆದರೆ ಶಾಸಕರ ಮಾತಿಗೂ ಬೆಲೆ ಕೊಡದೆ ಸಂಜೆಯಾದರೂ ಬಾರದೆ ಸತಾಯಿಸಿದರು. ಸ್ಥಳೀಯ ಶಾಸಕರ ಮಾತಿಗೂ ಕಿಂಚಿತ್ತು ಬೆಲೆ ಕೊಡದೆ ಅಪಮಾನ ಮಾಡಿದ್ದಾರೆ. ಯಾವುದೇ ಸರ್ಕಾರವಿರಲಿ ಯಾವುದೇ ಪಕ್ಷ ಅಧಿಕಾರ ನಡೆಸುತ್ತಿರಲಿ. ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ಆದವರಿಗೆ ಅಧಿಕಾರಿಗಳು ಗೌರವ ನೀಡಬೇಕು. ಆದರೆ ಹಾಸನದ ನಗರಸಭೆಯಲ್ಲಿ ಆಯುಕ್ತರಾಗಿ ಇತ್ತೀಚೆಗಷ್ಟೇ ಬಂದಿರುವಂತಹ ನರಸಿಂಹಮೂರ್ತಿ ಶಾಸಕರ ಮಾತಿಗೆ ಬೆಲೆ ಕೊಡದೆ ಅಗೌರವ ತೋರುವ ಮೂಲಕ ದುರಹಂಕಾರದಿಂದ ವರ್ತಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಆಯುಕ್ತರನ್ನ ತರಾಟೆಗೆ ತೆಗೆದುಕೊಂಡ ಶಾಸಕ
ಎಷ್ಟೇ ಕರೆ ಮಾಡಿ ಆಯುಕ್ತರನ್ನು ಸ್ಥಳಕ್ಕೆ ಬರುವಂತೆ ಹೇಳಿದರೂ ಕೂಡ ಸ್ಥಳಕ್ಕೆ ಬಾರದ ಆಯುಕ್ತರನ್ನು ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡ ಶಾಸಕರು ‘ನೀನು ಹಠ ಮಾಡಿದರೆ ನಿನ್ನ ಅಪ್ಪನಂತೆ ಹಠ ಮಾಡುತ್ತೇನೆ. ನೀನು ಇಲ್ಲಿಗೆ ಬರಬೇಕು. ಯಾವ ಡಿಸಿ ಹೇಳಿದರು ಅಷ್ಟೇ ಇಲ್ಲಿಗೆ ಬರಬೇಕು. ಇಲ್ಲವಾದರೆ ನಗರಸಭೆಯ ಮುಂದೆ ಬಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು,’ ಎಂದು ಎಚ್ಚರಿಸಿದರು. ಆದರು ಕೂಡ ಆಯುಕ್ತರು ಸ್ಥಳಕ್ಕೆ ಆಗಮಿಸಲಿಲ್ಲ.
ಪರಿಹಾರ ನೀಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ರೇವಣ್ಣ
ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸುವ ಮೂಲಕ ಅಧಿಕಾರಿಗಳು ಬಡವರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ಶಾಸಕರ ಮಾತಿಗೂ ಅಧಿಕಾರಿಗಳಿಗೂ ಬೆಲೆ ನೀಡಿಲ್ಲ. ಈಗ ಆಗಿರುವ ನಷ್ಟದ ಪಟ್ಟಿಯನ್ನು ತಯಾರಿಸಲಾಗುವುದು. ಈ ನಷ್ಟವನ್ನು ನಗರಸಭೆ ಆಯುಕ್ತರು ಅಥವಾ ಜಿಲ್ಲಾಡಳಿತ ಭರಿಸದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಶಾಸಕ ಎಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದರು.
3 ಲಕ್ಷ ರೂ. ನಷ್ಟವಾಗಿದೆ ಎಂದ ಕಮಲಮ್ಮ
‘ನನಗೆ ವ್ಯಾಪಾರ ಮಾಡಲೆಂದೆ ನಗರಸಭೆಯಿಂದ ಗುರುತಿನ ಚೀಟಿ ನೀಡಿದ್ದಾರೆ. ಮುಂಚಿತವಾಗಿಯೇ ಹೇಳಿದರೆ ನಾನೇ ಅಂಗಡಿ ಖಾಲಿ ಮಾಡುತ್ತಿದ್ದೆ. ವಯಸ್ಸಿಗೆ ಬಂದ ಮಗ ಮೃತಪಟ್ಟಿದ್ದಾನೆ. ನನ್ನ ಗಂಡ ಕಾಯಿಲೆಯಿಂದ ಹಾಸಿಗೆ ಹಿಡಿದು ಮಲಗಿದ್ದಾರೆ. ನಾನೊಬ್ಬಳೇ ನನ್ನ ಗಂಡನನ್ನು ಸಾಕಬೇಕಿದೆ. ಆದರೆ, ಈಗ ಬದುಕಿಗೆ ಆಧಾರವಾಗಿದ್ದ ಅಂಗಡಿಯನ್ನೇ ಸಂಪೂರ್ಣ ಧ್ವಂಸಗೊಳಿಸಿದ್ದಾರೆ. ಇದರಿಂದ ನನಗೆ ಮೂರು ಲಕ್ಷ ರೂ. ನಷ್ಟವಾಗಿದೆ. ನನಗೆ ನ್ಯಾಯ ಸಿಗದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ,’ ಎಂದು ವ್ಯಾಪಾರಸ್ಥೆ ಕಮಲಮ್ಮ ಶಾಸಕ ಸ್ವರೂಪ್ ಎದುರು ತಮ್ಮ ಅಳಲು ತೋಡಿಕೊಂಡರು.