

ಕೋಲಾರ: ನಗರಸಭೆಯಲ್ಲಿ 35 ಸದಸ್ಯರಿದ್ದು, ಸಭೆಗಳಿಗೆ ಅವರೇ ಸುಪ್ರೀಂ ಹೊರತು ಜಿಲ್ಲಾಧಿಕಾರಿ ಅಲ್ಲ. ಮಳಿಗೆಗಳನ್ನು ನಿರ್ಮಿಸಬೇಕಿರುವ ಜಾಗವನ್ನು ಹೋರಾಟಗಳಿಗೆ ಸ್ಥಳ ನಿಗದಿ ಮಾಡಲು ಜಿಲ್ಲಾಧಿಕಾರಿಗೆ ಯಾರು ಶಿಫಾರಸು ಮಾಡಿದ್ದಾರೆ? ಅನುಮತಿ ಕೊಟ್ಟವರು ಯಾರು ಎಂದು ಕೋಲಾರ ನಗರಸಭೆ ಹಲವು ಸದಸ್ಯರು ಪೌರಾಯುಕ್ತ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಶ್ವೇತಾ ಶಬರೀಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನಗರಸಭೆಯಿಂದ ಹಳೆಯ ಬಸ್ ನಿಲ್ದಾಣ ಸಮೀಪದ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಲು ತೀಮಾರ್ನಿಸಲಾಗಿದೆ. ಆದರೆ, ಅಲ್ಲಿ ಜಿಲ್ಲಾಧಿಕಾರಿ ಹೋರಾಟಗಳನ್ನು ನಡೆಸಲು ಸ್ಥಳ ನಿಗದಿಪಡಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿಚಾರ ಚರ್ಚೆಯಾಗುತ್ತಿದ್ದ ವೇಳೆ ಪೌರಾಯುಕ್ತ ಪ್ರಸಾದ್ ಅವರು ೋನ್ನಲ್ಲಿ ಮಾತನಾಡಿಕೊಂಡು ಹೊರಗೆ ಹೋಗುತ್ತಿದ್ದಂತೆಯೇ ಗರಂ ಆದ ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್, ಸಭೆಯ ಗೌರವ ಕಾಪಾಡಬೇಕು. ಪ್ರಧಾನಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸೇರಿ ಯಾರೇ ೋನ್ ಮಾಡಿದರೂ ಸರಿಯೇ ನೀವು ಮೊದಲು ಸಭೆಗೆ ಗೌರವ ನೀಡುವುದನ್ನು ಕಲಿಯಿರಿ. ಎಂಎಲ್ಎ, ಎಂಎಲ್ಸಿಗಳಿಗೆ ಕೊಂಬುಗಳು ಇರುವುದಿಲ್ಲ. ನಾವೂ ಜನರಿಂದಲೇ ಆಯ್ಕೆಯಾಗಿದ್ದೇವೆ. ಅಧಿಕಾರ ವಿಕೇಂದ್ರೀಕರಣದ ಬಗ್ಗೆ ತಿಳಿದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಬಾರದು ಎಂದಾದರೆ, ನಗರಸಭೆ ಆಸ್ತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವುದು ಸರಿಯೇ ಎಂದು ಜಿಲ್ಲಾಧಿಕಾರಿ ಆದೇಶದ ವಿರುದ್ಧ ಆಕ್ರೋಶ ಹೊರಹಾಕಿದರು.
ಸದಸ್ಯ ಅಂಬರೀಶ್ ಮಾತನಾಡಿ, ಅಧ್ಯಕ್ಷರ ಅನುಮತಿಯಿಲ್ಲದೆ ಹೋರಾಟಗಳಿಗೆ ಸ್ಥಳ ನಿಗದಿಪಡಿಸಲಾಗಿದೆ. ಟ್ರಂಚ್ ಹಾಕಿರುವುದನ್ನು ಕೂಡಲೇ ತೆರವುಗೊಳಿಸಿ ಬ್ಯಾನರ್ ಹಾಕಿ. ಅಲ್ಲದೆ ಹೋರಾಟಗಳು ಸಂವಿಧಾನದ ಹಕ್ಕಾಗಿದ್ದು, ಯಾರು ಎಲ್ಲಿ ಬೇಕಾದರೂ ಹೋರಾಟ ಮಾಡಬಹುದು. ಆದರೆ ಜಿಲ್ಲಾಧಿಕಾರಿ ಹೋರಾಟಗಳನ್ನು ದಮನ ಮಾಡಲು ಹೊರಟಿರುವುದು ಸರಿಯಲ್ಲ ಎಂದರು. ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ಸರ್ಕಾರಿ ಆದೇಶದಂತೆ ತೆರಿಗೆ ನಿಗದಿ ಮಾಡಿ. ತೆರಿಗೆ ಸಂಗ್ರಹ ಮಾಡುವಾಗ ತಾರತಮ್ಯ ಮಾಡಬೇಡಿ. ಮನೆಗಳ ಬಳಿಯೇ ಸಂಗ್ರಹಿಸಲು ಆನ್ಲೈನ್ ವ್ಯವಸ್ಥೆ ಮಾಡಬೇಕು. ರಂಜಾನ್ ಸಂಬಂಧ ಸಭೆ ನಡೆಸಿರುವಂತೆಯೇ ಎಲ್ಲ ಹಬ್ಬಗಳ ಸಮಯದಲ್ಲಿಯೂ ಸಭೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು. ಸದಸ್ಯ ರಾಕೇಶ್, ಚಿಕನ್ ಅಂಗಡಿ ಮಾಲೀಕರ ಬಳಿ ಪೌರಕಾರ್ಮಿಕರ ಮೇಸ್ತ್ರಿಗಳು ವಸೂಲಿ ಮಾಡುತ್ತಿದ್ದಾರೆ ಎಂದರು. ರಂಜಾನ್ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ಚುರುಕುಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಅಧ್ಯಕ್ಷೆ ಶ್ವೇತಾ ಶಬರೀಶ್ ಮಾತನಾಡಿ, ಹಳೆಯ ಬಸ್ ನಿಲ್ದಾಣ ಸಮೀಪದ ನಗರಸಭೆ ಜಾಗದಲ್ಲಿ ಪ್ರತಿಭಟನೆಗಳನ್ನು ಮಾಡಲು ಅನುಮತಿ ನೀಡಿರುವ ಸಂಬಂಧ ಡಿಸಿ ಬಳಿ ಚರ್ಚೆ ನಡೆಸಿದ್ದರೂ ಕ್ರಮ ಕೈಗೊಂಡಿಲ್ಲ. ಕರೊನಾ 4ನೇ ಅಲೆ ಬರುತ್ತಿದ್ದು, ಎಲ್ಲರೂ ಬೂಸ್ಟರ್ ಡೋಸ್ ಪಡೆದು ಮಾಸ್ಕ್ ಕಡ್ಡಾಯವಾಗಿ ಧರಿಸುವ ಮೂಲಕ ನಿಯಮ ಪಾಲಿಸಬೇಕು ಎಂದರು. ನಗರಸಭೆ ವ್ಯವಸ್ಥಾಪಕ ತ್ಯಾಗರಾಜ್ ಇತರರು ಇದ್ದರು.
ಕನಿಷ್ಠ ಶೇ.3 ತೆರಿಗೆ ಹೆಚ್ಚಳ ಮಾಡುತ್ತಿರುವುದು ಶ್ಲಾಘನೀಯ. ಅನಧಿಕೃತ ಆಸ್ತಿಗಳನ್ನು ಪಟ್ಟಿ ಮಾಡಬೇಕು. ಮನೆಗಳು, ಅಂಗಡಿಗಳ ಬಗ್ಗೆ ನಗರಸಭೆಯಲ್ಲಿ ಮಾಹಿತಿಯೇ ಇಲ್ಲ. ಸರ್ವೇ ಕಾರ್ಯವೂ ಪೂರ್ಣಗೊಂಡಿಲ್ಲ, ಪುಸ್ತಕಗಳ ನಿರ್ವಹಣೆಯಿಲ್ಲ. ಎಲ್ಲವೂ ಬದಲಾಗಲಿ ಎಂದು ಸಲಹೆ ನೀಡಿದರು. ಪ್ರವಿಣ್ಗೌಡ, ಸದಸ್ಯ, ನಗರಸಭೆ.