ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ

02rajesh1
Published on

ಚಾಮರಾಜನಗರ: ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಬಿ-ಖಾತಾ ಮಾಡಿಕೊಡಲು 20 ಸಾವಿರ ರೂ, ಲಂಚ ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿತು.

ನಗರದ ನಗರಸಭೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವಾರು ಸದಸ್ಯರು ಮಾತನಾಡಿ, ಮಧ್ಯವರ್ತಿಗಳ ಹಾವಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಸವಿಲೇವಾರಿ, ಅಮೃತ್-2 ಯೋಜನೆಯ ಕಾಮಗಾರಿ ಅಧ್ವಾನಗಳ ಕುರಿತು ಅಧಿಕಾರಿ ವರ್ಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸದಸ್ಯ ಎನ್.ಖಲೀಲ್ ಉಲ್ಲಾ ಮಾತನಾಡಿ, ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಸಾರ್ವಜನಿಕರಲ್ಲದೇ, ಸದಸ್ಯರು ಕೂಡ ಬೇಸತ್ತು ಹೋಗಿದ್ದೇವೆ. ಬಿ-ಖಾತೆ ಮಾಡಿಕೊಡಲು 20 ಸಾವಿರ ರೂ, ಪಡೆದುಕೊಳ್ಳುತ್ತಿದ್ದಾರೆ. ಕಚೇರಿಯ ಕಡತಗಳು ಮಧ್ಯವರ್ತಿಗಳ ಬಳಿಯಲ್ಲಿಯೇ ಇರುತ್ತದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬ್ರೋಕರ್‌ಗಳ ಜತೆಗೆ ಓಡಾಡುತ್ತಾರೆ. ಯಾರು ಕೂಡ ಸದಸ್ಯರ ಕೆಲಸಗಳನ್ನು ಮಾಡಿಕೊಡುವುದಿಲ್ಲ, ಏಕವಚನದಲ್ಲಿ ಮಾತನಾಡುತ್ತಾರೆ. ಆದರೇ ಮಧ್ಯವರ್ತಿಗಳ ಕೆಲಸಗಳನ್ನು ಮಾತ್ರ ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

ಸದಸ್ಯೆ ಸುಧಾ ಮಾತನಾಡಿ, ನನ್ನ ವಾರ್ಡ್ ವ್ಯಾಪ್ತಿಯ 6 ಕಡತಗಳನ್ನು ಕೊಟ್ಟು ವರ್ಷಗಳೇ ಕಳೆದಿದೆ. ಆದರೇ ಮಧ್ಯವರ್ತಿಗಳ ಕೆಲಸಗಳು ಆದಷ್ಟು ಬೇಗ ಆಗುತ್ತದೆ. ನಗರಸಭಾ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸದಸ್ಯೆ ಕುಮುದಾ ಕೇಶವಮೂರ್ತಿ ಮಾತನಾಡಿ, ಖಾತೆ ಮತ್ತು ಕಂಪ್ಯೂಟರ್ ವಿಭಾಗದಲ್ಲಿ ಸೂಕ್ತ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಸಿಬ್ಬಂದಿಗಳು ಸಾರ್ವಜನಿಕರ ಕರೆಗಳನ್ನು ಸ್ವೀಕರಿಸುವುದಿಲ್ಲ. ನಾನು ಒಂದು ಕಡತವನ್ನು ಕೊಟ್ಟು 1 ವರ್ಷ ಕಳೆದಿದ್ದು, ಮಧ್ಯವರ್ತಿಗಳ ಕೆಲಸ ಮಾತ್ರ ಆಗುತ್ತಿದೆ ಎಂದು ಆರೋಪಿಸಿದರು.

ಕಂದಾಯ ಅಧಿಕಾರಿ ಶಕೀಲ್ ಅಹಮದ್ ಪ್ರತಿಕ್ರಿಯಿಸಿ, ನಾನು 15 ದಿನಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದೇನೆ. ಸಕಾಲದಲ್ಲಿ ಕೆಲವು ಸಮಸ್ಯೆಗಳು ಇದ್ದು, ಮುಂದಿನ ದಿನಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲಾಗುವುದು ಎಂದರು. ಸಭೆಯಲ್ಲಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ, ಪೌರಾಯುಕ್ತ ಎಸ್.ವಿ.ರಾಮದಾಸ್ ಹಾಗೂ ಸದಸ್ಯರು ಹಾಜರಿದ್ದರು.

ಕಸದ ಸದ್ದು ಜೋರು:

ನಗರದ ವಾರ್ಡ್‌ಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ವಾರ್ಡ್‌ಗಳು ಗಬ್ಬುನಾರುತ್ತಿದೆ. ವಾರ್ಡ್‌ಗಳಿಗೆ ಕಸ ವಿಲೇವಾರಿ ವಾಹನಗಳು ಬರುತ್ತಿಲ್ಲ. ಇದರಿಂದ ನಗರಸಭೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಸದಸ್ಯೆ ತೌಸಿಯಾ ಬಾನು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯ ಕಲೀಲ್ ಉಲ್ಲಾ ಮಾತನಾಡಿ,ವಾರ್ಡ್‌ಗಳಲ್ಲಿ ಕಸದ ಸಮಸ್ಯೆ ನಿತ್ಯವೂ ತಲೆದೋರುತ್ತಿದೆ. ಮಾಧ್ಯಮಗಳಲ್ಲಿ ನಿತ್ಯವೂ ಸುದ್ದಿಯಾಗುತ್ತಿದ್ದರೂ, ಈ ಕುರಿತುಅಧಿಕಾರಿಗಳು ಗಮನಹರಿಸುತ್ತಿಲ್ಲ. ನಗರಸಭೆಯಲ್ಲಿರುವ ವಾಹನಗಳು ಎಷ್ಟು, ಬಳಕೆಯಾಗುತ್ತಿರುವ ವಾಹನಗಳು ಎಷ್ಟು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆರೋಗ್ಯ ನಿರೀಕ್ಷಕರು ಸೂಕ್ತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಅವರಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೇ ನೋಟಿಸ್ ನೀಡಿ ಬೇರೆ ಕಡೆಗೆ ಕಳುಹಿಸಿ ಎಂದು ಹಲವಾರು ಸದಸ್ಯರು ದೂರಿದರು. ಅಧಿಕಾರಿಗಳು ಅಗತ್ಯವಾದ ಮಾಹಿತಿ ನೀಡದಿರುವುದು ಸಮಸ್ಯೆಯ ರೂಪವನ್ನು ಅನಾವರಣಗೊಳಿಸಿತು.

ಅಮೃತ್-2 ಕಾಮಗಾರಿ ಅಧ್ವಾನ:

ನಗರದ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಅಮೃತ್-2 ಯೋಜನೆಯ ಕಾಮಗಾರಿ ಅಧ್ವಾನವಾಗಿದೆ ಎಂದು ದೂರಿ, ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ವಿಭಾಗದ ಎಇಇ ಮತ್ತು ಇಂಜಿನಿಯರ್‌ಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಕೆಲವು ವಾರ್ಡ್‌ಗಳಲ್ಲಿ ರಸ್ತೆಗಳನ್ನು ಅಗೆದು ಹಾಕಿದ್ದು, ಸಾರ್ವಜನಿಕರು ಓಡಾಡಲು ಸಮಸ್ಯೆಯಾಗುತ್ತಿದೆ. ಕೆಲವು ಮನೆಗಳಿಗೆ ನಳ ಸಂಪರ್ಕವನ್ನು ಕಲ್ಪಿಸಿಲ್ಲ. ಕೆಲವು ಕಡೆಗಳಲ್ಲಿ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದ್ದು, ರಸ್ತೆಗಳು ಅಧ್ವಾನದಿಂದ ಕೂಡಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸದಸ್ಯೆ ಆಶಾ ನಟರಾಜ್ ಮಾತನಾಡಿ, ಕುಡಿಯುವ ನೀರು ಪೈಪ್‌ಲೈನ್ ಬರುವ ಮಾರ್ಗಮಧ್ಯೆ 6 ಗ್ರಾಮಗಳಿಗೆ ನೀರು ಪೂರೈಕೆ ಮಾಡುತ್ತಿದ್ದು, ಅವರಿಂದ ತೆರಿಗೆ ವಸೂಲಿ ಮಾಡಬೇಕು. ನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಕ್ಲಿನಿಕ್‌ಗೆ ಮಳಿಗೆ ನೀಡಿ:

ನಗರದಲ್ಲಿ ಈಗಾಗಲೇ ಬಾಡಿಗೆ ಕಟ್ಟಡದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯುತ್ತಿದೆ. ಅದಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಸಂಬಂಧ ಜಾಗ ಕಲ್ಪಿಸಿಕೊಡಬೇಕು. ನಗರದಲ್ಲಿ ಮತ್ತೊಂದು ನಮ್ಮ ಕ್ಲಿನಿಕ್ ಆರಂಭಿಸಲು ಕಟ್ಟಡ ಸಮಸ್ಯೆ ಎದುರಾಗಿದ್ದು, 15-20 ಸಾವಿ ರೂ, ಬಾಡಿಗೆಯ ಕಟ್ಟಡವನ್ನು ನೀಡಿದರೆ ಅನುಕೂಲವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಕೋರಿದರು. ಇದೇ ವೇಳೆ ಸಂತೇಮರಹಳ್ಳಿ ವೃತ್ತದಲ್ಲಿರುವ ಆಧುನಿಕ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿರುವ ಸಂಬಂಧ ಚರ್ಚೆ ನಡೆಯಿತು. ಲೋಕೋಪಯೋಗಿ ಇಲಾಖೆಯ ಎಇಇ ಶಾಂತಮ್ಮ ಮಾತನಾಡಿ, 2018-19 ಸಾಲಿನಲ್ಲಿ ಅನುದಾನ ವಾಪಸ್ ಹೋಗಿದ್ದು, ಇನ್ನೂ 1.68 ಕೋಟಿ ರೂ, ಕೆಲಸ ಬಾಕಿ ಇದೆ ಎಂದು ಮಾಹಿತಿ ನೀಡಿದರು. ಅಧ್ಯಕ್ಷ ಸುರೇಶ್ ಪ್ರತಿಕ್ರಿಯಿಸಿ, ಕಟ್ಟಡವನ್ನು ನಗರಸಭೆಗೆ ಹಸ್ತಾಂತರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಕಂದಾಯ ವಸೂಲಿಗೆ ಆಗ್ರಹ:

ನಗರದಲ್ಲಿರುವ ಲೋಕೋಪಯೋಗಿ ಇಲಾಖೆಯ ವಸತಿಗೃಹಗಳಿಂದಲೇ ಅಂದಾಜು 36.50 ಕೋಟಿ ರೂ, ಕಂದಾಯ ವಸೂಲಿ ಆಗಬೇಕಿದೆ. ಆದರೆ ಈ ವರೆಗೂ ಯಾವುದೇ ಕ್ರಮವಹಿಸಿಲ್ಲ. ಈ ಹಣ ವಸೂಲಾದರೆ ನಗರಸಭೆಗೆ ಅನುಕೂಲವಾಗಲಿದೆ ಎಂದು ಸದಸ್ಯ ಎಂ.ಮಹೇಶ್ ಗಮನಸೆಳೆದರು. ಎಇಇ ಶಾಂತಮ್ಮ ಪ್ರತಿಕ್ರಿಯಿಸಿ, ಈ ಸಂಬಂಧ ಪ್ರಾದೇಶಿಕ ಆಯುಕ್ತರ ಕಚೇರಿಗೆ ಪತ್ರ ವ್ಯವಹಾರ ಮಾಡಲಾಗಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಆರೋಗ್ಯ ಇಲಾಖೆಯವರು ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಬಳಿ ಇರುವ ಹೊಸ ಮಾರುಕಟ್ಟೆ ಕಟ್ಟಡವನ್ನು ನಮ್ಮ ಕ್ಲಿನಿಕ್ ಪ್ರಾರಂಭಿಸಲು ಬಾಡಿಗೆಗೆ ಕೇಳಿದ್ದಾರೆ. ಒಂದು ಖಾಸಗಿ ಆಸ್ಪತ್ರೆಯವರು ಕೂಡ ಬಾಡಿಗೆಗೆ ಕೇಳಿದ್ದಾರೆ. ಸಂತೇಮರಹಳ್ಳಿ ವೃತ್ತದ ಸಮೀಪದಲ್ಲಿರುವ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ಮಳಿಗೆಗಳನ್ನು ಬಾಡಿಗೆ ನೀಡಲು ಕ್ರಮವಹಿಸಲಾಗುವುದು.

-ಸುರೇಶ್, ಅಧ್ಯಕ್ಷ, ನಗರಸಭೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net