

ಗದಗ: ಗದಗ-ಬೆಟಗೇರಿ ನಗರಸಭೆಯಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ ಎನ್ನುವ ಆರೋಪ ಎದುರಾಗಿದೆ. ಲಂಚ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದು ಜೈಲಿಗೆ ಹೋಗಿದ್ದಾರೆ. ಸ್ವತಃ ನಗರಸಭೆ ಮುಖ್ಯಸ್ಥ ಪೌರಾಯುಕ್ತರು ಲಂಚ ಕೇಳಿದ ಆರೋಪಕ್ಕೆ ಸಿಲುಕಿ ಪೊಲೀಸರ ವಿಚಾರಣೆಗೆ ಗುರಿಯಾಗಿದ್ದಾರೆ. ಹೀಗಿದ್ದರೂ ನಗರಸಭೆಯಲ್ಲಿ ಲಂಚ ಕೇಳುವ ಪರಿಪಾಠ ಎಗ್ಗಿಲ್ಲದೇ ಸಾಗಿದೆ.
ನಗರಸಭೆಯಲ್ಲಿ ಜನನ ಮರಣ ವಿಭಾಗದಲ್ಲಿ ಪ್ರಮಾಣಪತ್ರ ಪಡೆಯಲು ಕೇವಲ ಸರ್ಕಾರ ಐದು ರೂಪಾಯಿ ಶುಲ್ಕ ನಿಗದಿಪಡಿಸಿದೆ. ಆದರೆ, ಸದ್ಯ 10, 20 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎನ್ನುವುದು ಜನರ ಆರೋಪ. ಇದು ಚಿಕ್ಕ ಮೊತ್ತ ಎನಿಸಿದರೂ ಭ್ರಷ್ಟಚಾರದ ಒಂದು ಭಾಗವಾಗಿದೆ.
ಮನೆ, ವಾಣಿಜ್ಯ ಮಳಿಗೆಗಳ ಉತಾರ ಪಡೆಯಲು ಬಹುಶಃ ರಾಜ್ಯದ ಯಾವುದೇ ನಗರಸಭೆಯಲ್ಲಿ ಈ ಮಟ್ಟದ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. 2500 ರೂಪಾಯಿ ನೀಡಿದರೆ ತಿಂಗಳೊಳಗೆ ಉತಾರ ಸಿಗುತ್ತದೆ. ಹಣ ಕೊಡದಿದ್ದರೆ ಕನಿಷ್ಠ 6 ತಿಂಗಳಾದರೂ ಕಾಯಬೇಕು. ಸರ್ವರ್ ಇಲ್ಲ ಎಂದು ಜನಪ್ರತಿನಿಧಿಗಳಿಗೆ ಯಾಮಾರಿಸಿ ತಿಂಗಳುಗಟ್ಟಲೇ ಕಾಯಿಸುತ್ತಾರೆ ಇಲ್ಲಿನ ಸಿಬ್ಬಂದಿ. ಸೈನಿಕರು, ಪೊಲೀಸ್ ಪೇದೆಗಳಿಂದಲೂ ಹಣ ವಸೂಲಿ ಮಾಡಿದವರು ನಗರಸಭೆಯಲ್ಲಿದ್ದಾರೆ. ಮಾಜಿ ಶಾಸಕರು, ಜಿಪಂ ಮಾಜಿ ಅಧ್ಯಕ್ಷರ ಉತಾರ ನೀಡಲು 3ರಿಂದ 6 ತಿಂಗಳು ಕಾಯಿಸಿದ ಉದಾಹರಣೆಯೂ ಇದೆ.
ಕಟ್ಟಡ ಪರವಾನಗಿ ಚಿನ್ನದ ಮೊಟ್ಟೆ
ಅವಳಿ ನಗರದಲ್ಲಿ ಕಟ್ಟಡ ಪರವಾನಗಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪದ್ಧತಿ ಇದೆ. ದಾಖಲೆಗಳು ಸಮರ್ಪಕವಾಗಿದ್ದರೆ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಪರವಾನಗಿ ನೀಡಬೇಕು. ಆದರೆ, ಅರ್ಜಿದಾರ ಅರ್ಜಿ ಸಲ್ಲಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿದರೆ ಮಾತ್ರ ಅರ್ಜಿ ಫಾರ್ವರ್ಡ್ ಆಗಲಿದೆ. ಅರ್ಜಿದಾರ ಭೇಟಿ ಆಗದಿದ್ದರೆ ಅರ್ಜಿ ಯಥಾಸ್ಥಿತಿಯಲ್ಲಿಯೇ ಇರುತ್ತದೆ. ಹಣ ಕೊಟ್ಟು ಪರವಾನಗಿ ಪಡೆಯುವುದಾದರೆ ಆನ್ಲೈನ್ ಅರ್ಜಿ ಹಾಕುವ ವ್ಯವಸ್ಥೆ ಮಾಡಿದ್ದೇಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಗುತ್ತಿಗೆದಾರರಿಂದ ವಸೂಲಿ
ನಗರಸಭೆಯ ಕಾಮಗಾರಿಗಳಲ್ಲಿ ಅಧಿಕಾರಿಗಳು ಗುತ್ತಿಗೆದಾರರಿಂದ ಶೇ. 7ರಿಂದ ಶೇ. 8ರಷ್ಟು ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪವೂ ಸಾರ್ವತ್ರಿಕವಾಗಿದೆ. ಅಲ್ಲದೆ, ನಗರಸಭೆಯಲ್ಲಿ ಐದಾರು ವಾರ್ಡ್ಗಳಿಗೆ ಒಬ್ಬ ಸಿಬ್ಬಂದಿ (ವಾರ್ಡ್ ಕಾರಕೂನರು) ನೇಮಿಸಲಾಗಿದೆ. ಆಯಾ ವಾರ್ಡ್ನ ಸಮಸ್ಯೆಗಳನ್ನು ಅವರು ನಿಭಾಯಿಸುತ್ತಾರೆ. ಈ ಕಾರಕೂನರು ತಲಾ ಇಬ್ಬರು ಸಹಾಯಕರನ್ನು ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಈ ಸಹಾಯಕರ ಮೂಲಕ ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ.
ಜೈಲಿಂದ ಬಿಡುಗಡೆ
ಪೌರ ಕಾರ್ವಿುಕರ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ವಿುಕರ ಸಮುಚ್ಚಯ ನಿರ್ವಣಕ್ಕಾಗಿ ಜಮೀನಿನಿಂದ ಮಣ್ಣನ್ನು ಹೊರಸಾಗಿಸುವ ಕಾಮಗಾರಿಯ ಬಿಲ್ ಪಾವತಿಸುವ ಕುರಿತು ಲಂಚದ ಬೇಡಿಕೆಯಿಟ್ಟು ಎಸಿಬಿ ಬಲೆಗೆ ಬಿದ್ದು ಜೈಲು ಸೇರಿದ್ದ ನಗರಸಭೆ ಸಹಾಯಕ ಇಂಜಿನಿಯರ್ ವರ್ಧಮಾನ ಹುದ್ದಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅನಿಲಕುಮಾರ ಮುದ್ದಾ ಜಾಮೀನು ಪಡೆದು ಹೊರಬಂದಿದ್ದಾರೆ. ಇದೇ ಕಾಮಗಾರಿಯ ಬಿಲ್ ಪಾವತಿಗಾಗಿ ಸ್ವತಃ ನಗರಸಭೆ ಪೌರಾಯುಕ್ತ ರಮೇಶ ಜಾಧವ ಅವರ ಮೇಲೆ 1.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಎಸಿಬಿ ಪೊಲೀಸರು ಮೂರು ದಿನ ವಿಚಾರಣೆ ನಡೆಸಿದರು. ಈ ಹಿನ್ನೆಲೆಯಲ್ಲಿ ಬಂಧನಭೀತಿ ಕೇಳಿಬಂದಿದ್ದರಿಂದ ಪೌರಾಯುಕ್ತರು ಮಧ್ಯಂತರ ಜಾಮೀನು ಪಡೆದು ಕೆಲಸಕ್ಕೆ ಹಾಜರಾಗಲು ಮುಂದಾಗಿದ್ದರು. ಆದರೆ, ಜಿಲ್ಲಾಧಿಕಾರಿಯವರು ಪೌರಾಯಕ್ತರನ್ನು ಕಡ್ಡಾಯ ರಜೆ ಮೇಲೆ ಕಳಿಸಿದ್ದಾರೆಂದು ತಿಳಿದು ಬಂದಿದೆ.
ರಮೇಶ ವಟಗಲ್ ಪ್ರಭಾರಿ
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯಕ್ತ ರಮೇಶ ವಟಗಲ್ ಅವರಿಗೆ ಗದಗ ಬೆಟಗೇರಿ ನಗರಸಭೆ ಪ್ರಭಾರಿ ಪೌರಾಯುಕ್ತ ಜವಾಬ್ದಾರಿ ನೀಡಲಾಗಿದೆ. ಪ್ರಭಾರಿ ಆಯುಕ್ತರು ನಗರಸಭೆಯ ಪದ್ಧತಿಯನ್ನು ಕೊಂಚ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. 20 ವರ್ಷಗಳ ಕಾಲ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ರಮೇಶ ವಟಗಲ್ ಅವರ ಕೈಯಲ್ಲಿ ಮೂರು ತಿಂಗಳು ಕಾಲ ನಗರಸಭೆ ಆಡಳಿತ ನೀಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.