ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಸಮಸ್ಯೆಗಳ ಸರಮಾಲೆ

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಸಮಸ್ಯೆಗಳ ಸರಮಾಲೆ
Published on

ಹಾಸನ: ನಗರಸಭೆಯ ಪ್ರತಿಯೊಬ್ಬ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಸಾಮಾನ್ಯ ಸಭೆಯಲ್ಲಿ ಅನಾವಣಗೊಳಿಸುವ ಮೂಲಕ ಶಾಸಕರು, ಅಧ್ಯಕ್ಷರ ಗಮನ ಸೆಳೆದು ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಗುರುವಾರ ಮುಂದುವರೆದ ಸಾಮಾನ್ಯ ಸಭೆಭೆಯಲ್ಲಿ 1ನೇ ವಾರ್ಡ್‌ನಿಂದ ಹಿಡಿದು 35ನೇ ವಾರ್ಡ್‌ವರೆಗೂ ಪ್ರತಿಯೊಬ್ಬ ಸಮಸ್ಯರೂ ತಮ್ಮ ವಾರ್ಡ್‌ನ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಡುವ ಜೊತೆಗೆ ನಗರದ ಸಮಗ್ರ ಅಭಿವೃದ್ಧಿಗೆ ವೈಕ್ತಿಯವಾಗಿ ಸಲಹೆ ನೀಡಿದರು.

ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಯುಜಿಡಿ, ಬೀದಿ ದೀಪ, ಪಾರ್ಕ್‌ಗಳ ಅಭಿವೃದ್ಧಿ, ಕಸ ವಿಲೇವಾರಿಯಲ್ಲಿ ಉಂಟಾಗಿರುವ ಸಮಸ್ಯೆ ಸೇರಿ ಹತ್ತು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿ ಶೀಘ್ರದಲ್ಲೇ ಬಗೆಹರಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು.

ಇನ್ನೂ ಕೆಲ ಸದಸ್ಯರು, ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ, ಸರಿಯಾದ ಸಮಯಕ್ಕೆ ನಮ್ಮ ಕೆಲಸಗಳಾಗುತ್ತಿಲ್ಲ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದು ಮಾತ್ರವಲ್ಲ, ಸಮಸ್ಯೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿ ವರ್ಷಗಳೇ ಕಳೆದರೂ ಇದುವರೆಗೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹೆಚ್.ಪಿ.ಸ್ವರೂಪ್, ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮಾತಿದೆ. ಆದರೆ, ನಗರಸಭೆಯ ಇಂಜಿನಿಯರ್‌ಗಳು, ಅಧಿಕಾರಿಗಳು ದೇವರೇ ಬಂದು ಮಾಡಲಿ ನಾವೇಕೆ ಮಾಡಬೇಕು ಎಂಬ ನಿರ್ಲಕ್ಷೃ ಧೋರಣೆ ತಾಳಿದಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ದೂರುಗಳು ಮತ್ತೆ ಕೇಳಿ ಬರದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಎಲ್ಲಾ ಸದಸ್ಯರಿಗೂ ಗೌರವ ನೀಡಿ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಕೆಲಸಗಳನ್ನು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಅಧ್ಯಕ್ಷ ಆರ್.ಮೋಹನ್, ಉಪಾಧ್ಯಕ್ಷ ಮಂಗಳ ಪ್ರದೀಪ್, ಆಯುಕ್ತ ಸತೀಶ್ ಕುಮಾರ್, ಇಂಜಿನಿಯರ್ ರಂಗಸ್ವಾವಿ ಹಾಜರಿದ್ದರು

ಸರ್ಕಾರಿ ಶಾಲೆಯಲ್ಲಿ ಸಮಸ್ಯೆ:

3ನೇ ವಾರ್ಡ್ ವಾರ್ಡಿನ ಸದಸ್ಯ ದಯಾನಂದ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮಕ್ಕಳು ಓದುವುದು ಕಷ್ಟ ಎನ್ನುವ ಸಂದರ್ಭದಲ್ಲಿ ನನ್ನ ವಾರ್ಡ್ನ ಎಂ.ಕೃಷ್ಣಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅವರಿಗೆ ಮೂಲಸೌಕರ್ಯಗಳಿಲ್ಲ. ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಕೂಡಲೇ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸದಸ್ಯರಿಂದ ಸಮಸ್ಯೆಗಳ ಪ್ರಸ್ತಾಪ:

4ನೇ ವಾರ್ಡ್ ಸದಸ್ಯ ವಾಸುದೇವ್ ಮಾತನಾಡಿ, ಮಿನಿ ವಿಧಾನಸೌಧದ ಬಳಿ ರಾಜಕಾಲುವೆ ಸಮಸ್ಯೆ ಬಗ್ಗೆ ಗಮನ ಹಲವು ಬಾರಿ ದೂರು ನೀಡಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

7ನೇ ವಾರ್ಡ್ ಸದಸ್ಯ ಸದಸ್ಯ ಆರ್.ಸಂತೋಷ್ ಮಾತನಾಡಿ, ಆರು ತಿಂಗಳ ಹಿಂದೆ ಗಂಧದಕೋಟಿ ಬಳಿ ರಸ್ತೆ ನಿರ್ಮಾಣವಾಗಿದೆ. ಆದರೆ ಬೀದಿ ದೀಪಗಳನ್ನು ಅಳವಡಿಸಿದ್ದರೂ ಕೂಡ ಅದನ್ನು ನಿರ್ವಹಣೆ ಮಾಡಿತ್ತಿಲ್ಲ. ನಗರದಲ್ಲಿ ಸಾಕಷ್ಟು ಕಡೆಗಳಲ್ಲಿ ಪಾಕಿರ್ಂಗ್ ಸಮಸ್ಯೆ ಉಂಟಾಗಿದೆ. ಆಸ್ಪತ್ರೆ, ಶಾಲಾ-ಕಾಲೇಜುಗಳ ಬಳಿ ಪಾಕಿರ್ಂಗ್ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿಕೊಂಡರು.

7ನೇ ವಾರ್ಡ್ ಸದಸ್ಯ ಗಿರೀಶ್ ಚನ್ನಗಿರಪ್ಪ ಮಾತನಾಡಿ, ನನ್ನ ವಾರ್ಡ್ಗೆ ಮಲತಾಯಿ ಧೋರಣೆಯಾಗುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ಯುಜಿಡಿ ಸಮಸ್ಯೆ ಮತ್ತು ಕುಡಿಯುವ ನೀರು ಸೇರಿ ಹಲವು ಸಮಸ್ಯೆಗಳಿವೆ. ಅಲ್ಲದೆ ನಗರದಲ್ಲಿ ಅಕ್ರಮವಾಗಿ ಪೆಟ್ಟಿಗೆ ಅಂಗಡಿಗಳು ಹುಟ್ಟಿಕೊಂಡಿದ್ದು, ಅವುಗಳನ್ನು ತಕ್ಷಣವೇ ತೆರವುಗೊಳಿಸಬೇಕು. ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಪಾರ್ಕ್ ಖಾಸಗಿ ವಾಹನಗಳ ಓಡಾಟವನ್ನು ತಡೆಯಬೇಕು. ಪಾರ್ಕ್ನಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

15ನೇ ವಾರ್ಡ್ನ ಸದಸ್ಯೆ ಅಶ್ವಿನಿ ಮಹೇಶ್ ಮಾತನಾಡಿ, ಎಸ್‌ವಿಎಂ ಶಾಲೆಯ ಮುಂಭಾಗದ ರಸ್ತೆಯಲ್ಲೇ ಟ್ರಾನ್ಸ್ಫಾರ್ಮ್ ಅಳವಡಿಕೆ ಮಾಡಿರುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ, ಹೀಗಾಗಿ ಅದನ್ನು ತೆರವುಗೊಳಿಸಿ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.

ನಗರ ಸಭೆಯ ಮನೆಗೆ ಕುಡಿಯುವ ನೀರಿಲ್ಲ

31ನೇ ವಾರ್ಡ್‌ನ ಸದಸ್ಯೆ ಹೆಚ್.ಎಂ.ವಿಜಯ ಮಾತನಾಡಿ, ನಮ್ಮ ಮನೆಗೆ ಕುಡಿಯುವ ನೀರು ಬರುತ್ತಿಲ್ಲ, ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ ನನ್ನ ಕ್ಷೇತ್ರದಲ್ಲಿ ಕೊಳವೆ ಬಾವಿ ಸಮಸ್ಯೆಯಿಂದಾಗಿ ಹಲವು ಮನೆಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.

ಪ್ರತಿಮೆ ಸ್ಥಾಪನೆಗೆ ಒತ್ತಾಯ:

ನಗರದ ಎನ್.ಆರ್.ವೃತದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯಿದೆ. ಆದ್ದರಿಂದ ಮೈಸೂರು ರಾಜರಾದ ನರಸಿಂಹರಾಜ ಒಡೆಯರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಒತ್ತಾಯಿಸಿದರು.

ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ಸದಸ್ಯರು ಜೋಡೆತ್ತುಗಳಂತೆ ಕೆಲಸ ಮಾಡಬೇಕು ಆಗ ಮಾತ್ರ ನಗರದ ಅಭಿವೃದ್ಧಿ ಮಾಡಲು ಸಾಧ್ಯ. ಆದರೆ ಇಲ್ಲಿ ಕೆಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಕಸವಿಲೇವಾರಿ ಆಟೋಗಳಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಅಧಿಕಾರಿಗಳು ತಿಳಿಹೇಳಬೇಕು. ನಗರದಲ್ಲಿರುವ ಹಲವು ವೃತ್ತಗಳನ್ನ ಅಭಿವೃದ್ಧಿಪಡಿಸಲು ಬ್ಯಾಂಕ್‌ಗಳನ್ನು ಸಂಘ-ಸಂಸ್ಥೆಗಳು ಮತ್ತು ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ದತ್ತು ನೀಡುವಂತಹ ಪ್ರಕ್ರಿಯೆ ಆರಂಭವಾಗಲಿ ಎಂದು ಹೇಳಿದರು.

ಗೌರವಧನ ಹೆಚ್ಚಳ ಮಾಡಿ:

ಸದಸ್ಯ ಯೋಗೇಂದ್ರ ಬಾಬು ಮಾತನಾಡಿ, ಶಾಸಕರಿಗೆ ಪ್ರತಿ ತಿಂಗಳು 2.40ಲಕ್ಷರೂ. ವೇತನ, ಭತ್ಯೆ, ಪಿಂಚಣಿ ಸೌಲಭ್ಯ ಸಿಗುತ್ತದೆ. ಆದರೆ, ನಗರಸಭೆ ಸದಸ್ಯರಾಗಿರುವ ನಮಗೆ ಕೇವಲ 4000 ಗೌರವದನ ಸಿಗುತ್ತಿದೆ. ಆದ್ದರಿಂದ ನಮಗೆ ಕನಿಷ್ಠ 50 ಸಾವಿರರೂ. ಗೌರವದನ ಸಿಗುವಂತೆ ಹಾಗು ಮನಗೂ ಪಿಂಚಣಿ ಸೌಲಭ್ಯ ದೊರಕಿಸಿಕೊಡಲು ಶಾಸಕರು ಸದನದಲ್ಲಿ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net