

ಹಾಸನ: ನಗರಸಭೆಯ ಸಾಮಾನ್ಯ ಸಭೆ ಕುವೆಂಪು ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಭೆ ಬೆಳಗ್ಗೆ 11 ಗಂಟೆಗೆ ಆರಂಭವಾದರೂ ಮಧ್ಯಾಹ್ನ 1 ಗಂಟೆಯವರೆಗೂ ಅಜೆಂಡಾದ ವಿಷಯಗಳು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬರಲೇ ಇಲ್ಲ. ಸದಸ್ಯರ ಆರೋಪ-ಪ್ರತ್ಯಾರೋಪಕ್ಕೆ ಬಹುತೇಕ ಸಮಯವನ್ನು ವ್ಯಯ ಮಾಡಲಾಯಿತು.
ನಗರಸಭೆಯ ಬಿಜೆಪಿ ಸದಸ್ಯ ಚಂದ್ರಶೇಖರ್ ಮಾತನಾಡಿ, ಜೆಡಿಎಸ್ ಸದಸ್ಯರು ತಮ್ಮ ಶಾಸಕರ ಎದುರು ಬಿಲ್ಡಪ್ ಕೊಡಲು ಮಾತನಾಡಬಾರದು. ನಮ್ಮ ವಾರ್ಡ್ ಸಮಸ್ಯೆಗಳ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡಬೇಕು ಎಂದು ಜೋರು ಧ್ವನಿಯಲ್ಲೇ ಕೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯ ಗಿರೀಶ್ ಚನ್ನವೀರಪ್ಪ, ‘ನಮಗೆ ಬಿಲ್ಡಪ್ ಕೊಡುವ ಅಗತ್ಯವಿಲ್ಲ. ನಮ್ಮ ಬಗ್ಗೆ ನಮ್ಮ ಶಾಸಕರಿಗೆ ಚೆನ್ನಾಗಿ ಗೊತ್ತು. ಕಳೆದ ಎರಡೂವರೆ ವರ್ಷ ನೀವೆಲ್ಲ ಹೇಗೆ ಬಿಲ್ಡಪ್ ಕೊಟ್ಟಿದ್ದೀರಿ, ನಮಗೆ ಎಷ್ಟು ಅನ್ಯಾಯ ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ,’ ಎಂದು ಬಿಜೆಪಿ ಸದಸ್ಯನ ಆರೋಪಕ್ಕೆ ತಿರುಗೇಟು ನೀಡಿದರು. ಇದಕ್ಕೆ ಮತ್ತೋರ್ವ ಜೆಡಿಎಸ್ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಧ್ವನಿಗೂಡಿಸಿ, ‘ಬಿಜೆಪಿ ಶಾಸಕರು ಇದ್ದ ವೇಳೆ ನೀವು ನಮಗೆಷ್ಟು ತಾರತಮ್ಯ ಮಾಡಿದ್ದೀರಿ ಎಂಬುದನ್ನು ತೆಗೆಯಬೇಕಾ? ಉದ್ವೇಗಕ್ಕೆ ಒಳಗಾಗಿ ಮಾತನಾಡಬಾರದು. ಬಿಲ್ಡಪ್ ನೀಡಲು ಯಾರು ಬರುವುದಿಲ್ಲ. ಎಲ್ಲರು ತಮ್ಮ ತಮ್ಮ ವಾರ್ಡ್‌ಗಳ ಸಮಸ್ಯೆ ಬಗ್ಗೆ ಚರ್ಚಿಸಲು ಬರುತ್ತಾರೆ, ಮಾತಿನ ಮೇಲೆ ಹಿಡಿತವಿರಬೇಕು,’ ಎಂದು ತರಾಟೆಗೆ ತೆಗೆದುಕೊಂಡರು.
ಬಳಿಕ ಚಂದ್ರಶೇಖರ್, ‘ಮಾತನಾಡುವ ಬರದಲ್ಲಿ ತಪ್ಪಾಗಿದೆ,’ ಎಂದು ಕ್ಷಮೆಯಾಚಿಸಿದರು. ನಂತರ ತಮ್ಮ ವಾರ್ಡ್ ಸಮಸ್ಯೆ ಹೇಳಿಕೊಳ್ಳಲು ಮುಂದಾದರು. ಈ ವೇಳೆ ಅಧ್ಯಕ್ಷರು ಬೇರೆ ಕಡೆ ಗಮನ ನೀಡಿದ್ದರಿಂದ ತಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲ ಎಂದು ಸಿಟ್ಟಾಗಿ, ‘ಏಯ್... ಅಧ್ಯಕ್ಷರೇ ಕೇಳ್ರಿ ಇಲ್ಲಿ,’ ಎಂದು ಏರು ಧ್ವನಿಯಲ್ಲಿ ಕರೆಯುತ್ತಿದ್ದಂತೆ, ಎದ್ದು ನಿಂತ ಅಧ್ಯಕ್ಷ ಮೋಹನ್ ಅವರು, ‘ಏನು ಹೆದರಿಸುತ್ತಿದ್ದೀರಾ? ಏಯ್ ಅಂದರೆ ಏನ್ ಅರ್ಥ? ಗೌರವ ಕೊಡುವುದನ್ನು ಕಲಿತುಕೊಳ್ಳಿ,’ ಎಂದು ಸ್ವಪಕ್ಷದ ಸದಸ್ಯನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯೆಪ್ರವೇಶ ಮಾಡಿದ ಶಾಸಕ ಎಚ್.ಪಿ.ಸ್ವರೂಪ್ ಅವರು, ‘ಇತ್ತೀಚೆಗಷ್ಟೇ ಮೈಸೂರಿಗೆ ತೆರಳಿ ತರಬೇತಿ ಪಡೆದುಕೊಂಡು ಬಂದರೂ ಸಭೆಯಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಇನ್ನೂ ಕಲಿತಿಲ್ಲವೆಂದರೆ ಹೇಗೆ? ಐದು ಜನ ಒಟ್ಟಿಗೆ ಮಾತನಾಡಿದರೆ ಯಾರ ಮಾತನ್ನು ನಾವು ಕೇಳಿಸಿಕೊಳ್ಳಬೇಕು? ಒಬ್ಬೊಬ್ಬರಾಗಿ ಮಾತನಾಡಿ ತಮ್ಮ ವಾರ್ಡ್ ಸಮಸ್ಯೆ ಸಂಬಂಧ ಪ್ರಶ್ನೆಗಳನ್ನು ಕೇಳಿ. ನಾನು, ಅಧ್ಯಕ್ಷರು, ಆಯುಕ್ತರು ಉತ್ತರ ನೀಡುತ್ತೇವೆ. ಅದನ್ನು ಬಿಟ್ಟು ಹೀಗೆ ಗದ್ದಲ ಮಾಡಿದರೆ ಸಮಯ ವ್ಯರ್ಥವಾಗುತ್ತದೆ. ಎಲ್ಲ ಸದಸ್ಯರು ಮೊದಲು ಅಧ್ಯಕ್ಷರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಿ,’ ಎಂದು ಸಲಹೆ ನೀಡಿದರು.
11ನೇ ವಾರ್ಡ್ ಸದಸ್ಯ ಬಾಬು ಮಾತನಾಡಿ, ‘ನಗರಸಭೆಗೆ ಸೇರಿದ 1.37ಎಕರೆ ಜಾಗವನ್ನು ಖಾಸಗಿ ಇಂಜಿನಿಯರಿಂಗ್ ಕಾಲೇಜು ಮಂಡಳಿಯವರು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ಹಲವು ಬಾರಿ ಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ,’ ಎಂದು ಆರೋಪಿಸಿದರು. ಇದಕ್ಕೆ ಇತರೆ ಸದಸ್ಯರು ಧ್ವನಿಗೂಡಿಸಿ, ‘ಪ್ರತಿ ಸಭೆಯಲ್ಲೂ ಇದೇ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ಕೊಡಲೇ ಕ್ರಮ ಕೈಗೊಳ್ಳುವಂತೆ,’ ಒತ್ತಾಯಿಸಿದರು.
ಆಯುಕ್ತ ಸತೀಶ್ ಪ್ರತಿಕ್ರಿಯಿಸಿ, ‘ಸಮೀಕ್ಷೆ ಮಾಡಿ ಜಾಗ ಗುರುತು ಮಾಡಲು ಈಗಾಗಲೇ ಎಡಿಎಲ್‌ಆರ್‌ಗೆ ಹೇಳಲಾಗಿದೆ. ಗುರುವಾರ ಸರ್ವೇಗೆ ಬರುವುದಾಗಿ ತಿಳಿಸಿದ್ದಾರೆ. ಬಳಿಕ ಒತ್ತುವರಿ ತೆರವುಗೊಳಿಸಿ ನಗರಸಭೆ ಆಸ್ತಿಯನ್ನು ರಕ್ಷಣೆ ಮಾಡಲಾಗುವುದು,’ ಎಂದು ತಿಳಿಸಿದರು.
35 ವಾರ್ಡ್‌ಗಳಲ್ಲೂ ಕಸದ ಸಮಸ್ಯೆ
ನಗರಸಭೆಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲೂ ಕಸದ ಸಮಸ್ಯೆ ವ್ಯಾಪಕವಾಗಿ ಕಾಡುತ್ತಿದೆ. ಆರೋಗ್ಯಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಪೌರಕಾರ್ಮಿಕರ ಕೊರತೆಯಿಂದ ನಗರದ ಸ್ವಚ್ಛತೆ ಸರಿಯಾಗಿ ಆಗುತ್ತಿಲ್ಲ ಎಂದು ಬಹುತೇಕ ಸದಸ್ಯರು ಆರೋಪಿಸಿದರು. ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, ‘ಕಳೆದ ಮೂರು ತಿಂಗಳಿಂದ ನಾನು ಸಂಬಳ ನೀಡಿ ಸ್ವಚ್ಛತೆಗಾಗಿ ಮೂರು ಜನರನ್ನು ನೇಮಕ ಮಾಡಿಕೊಂಡಿದ್ದೇನೆ. ಒಂದು ವಾರ್ಡ್‌ನಲ್ಲಿ ಒಬ್ಬ ಪೌರಕಾರ್ಮಿಕ ಸ್ವಚ್ಛತೆ ಮಾಡಲು ಹೇಗೆ ಸಾಧ್ಯ? ಇದು ನನ್ನ ವಾರ್ಡ್ ಸಮಸ್ಯೆ ಮಾತ್ರವಲ್ಲ. ಬಹುತೇಕ ಕಡೆ ಇದೇ ಸಮಸ್ಯೆ ಕಾಡುತ್ತಿದೆ,’ ಎಂದು ದೂರಿದರು.