ನಗರಸಭೆಯ 4 ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ

Published on

ಚಾಮರಾಜನಗರ: ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೈರಾಗಿದ್ದ ಹಾಗೂ ಪಕ್ಷಾಂತರ ಮಾಡಿದ್ದ 4 ನಗರಸಭಾ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ಆದೇಶ ಹೊರಡಿಸಿದ್ದಾರೆ.

ಚಾ.ನಗರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 2024 ಸೆ.9 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಗರಸಭಾ ಸದಸ್ಯರಾದ ಎಸ್.ನೀಲಮ್ಮ, ಭಾಗ್ಯ, ಬಿ.ಎಸ್.ಚಂದ್ರಕಲಾ ಹಾಗೂ ಆರ್.ಪಿ.ನಂಜುಂಡಸ್ವಾಮಿ ಅವರು ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಅವರು ವಿಪ್ ಜಾರಿಮಾಡಿದ್ದರು. ಆದರೇ ಕಾಂಗ್ರೆಸ್ ಸದಸ್ಯರಾದ ಎಸ್.ನೀಲಮ್ಮ, ಭಾಗ್ಯ, ಆರ್.ಪಿ.ನಂಜುಂಡಸ್ವಾಮಿ ಅವರು ವಿಪ್ ಆದೇಶವನ್ನು ಉಲ್ಲಂಸಿ ಚುನಾವಣೆಯಲ್ಲಿ ಗೈರು ಹಾಜರಾಗಿದ್ದರು. ಮತ್ತೊರ್ವ ಕಾಂಗ್ರೆಸ್ ಸದಸ್ಯರಾದ ಬಿ.ಎಸ್.ಚಂದ್ರಕಲಾ ಅವರು ಬಿಜೆಪಿ ಅಭ್ಯರ್ಥಿಯ ಪರವಾಗಿ ಕೈ ಎತ್ತು ಮೂಲಕ ಮತ ಚಲಾಯಿಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಮತ್ತು ನಗರಸಭಾ ಕಾಂಗ್ರೆಸ್ ಸದಸ್ಯ ಆರ್.ಎಂ.ರಾಜಪ್ಪ ಅವರು ವಿಪ್ ಉಲ್ಲಂಘನೆ ಮಾಡಿದ 4 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987 ರ ಅಡಿಯಲ್ಲಿ ದೂರು ಸಲ್ಲಿಸಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಾದ-ವಿವಾದಗಳು ನಡೆದು, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನಗರಸಭೆಯ 4 ಕಾಂಗ್ರೆಸ್ ಸದಸ್ಯರು ಉದ್ದೇಶಪೂರ್ವಕವಾಗಿ ಪಕ್ಷದ ವಿರುದ್ಧ ಮತ ಚಲಾಯಿಸಿರುವುದು ಹಾಗೂ ಗೈರುಹಾಜರಾಗಿರುವುದು ಸಾಬೀತಾಗಿರುವುದರಿಂದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು 4 ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಿದೆ. ಜಿಲ್ಲಾಧಿಕಾರಿಗಳ ನ್ಯಾಯಾಲಯ ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದ್ರೋಹ ಮಾಡುವವರಿಗೆ ಹಾಗೂ ಪಕ್ಷಾಂತರ ಮಾಡುವವರಿಗೆ ಇದು ದೊಡ್ಡ ಪಾಠವಾಗಿದೆ.

-ಪಿ.ಮರಿಸ್ವಾಮಿ, ಜಿಲ್ಲಾಧ್ಯಕ್ಷ, ಕಾಂಗ್ರೆಸ್, ಚಾಮರಾಜನಗರ

ಚುನಾವಣೆಯ ಸಂದರ್ಭದಲ್ಲಿ ಪೂರ್ವಭಾವಿಯಾಗಿ ಉತ್ತರ ಭಾರತದ ಪ್ರವಾಸ ನಿಗದಿಯಾಗಿದ್ದರಿಂದ ನಾನು ಚುನಾವಣೆಯಲ್ಲಿ ಭಾಗವಹಿಸಲು ಆಗಿರಲಿಲ್ಲ. ನಾವು ಇಲ್ಲದ ಸಮಯದಲ್ಲಿ ಪಕ್ಷದವರು ವಿಪ್ ಜಾರಿಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇನೆ.

-ನಂಜುಂಡಸ್ವಾಮಿ, ನಗರಸಭೆ ಸದಸ್ಯ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net