ನಗರಸಭೆಗೆ ಮರಳಿ ಬಂದ ರಾಮದಾಸ್

06rajesh7
Published on

ಚಾಮರಾಜನಗರ: ಕರ್ತವ್ಯಲೋಪದಡಿ ನಗರಸಭೆ ಪೌರಾಯುಕ್ತ ಹುದ್ದೆಯಿಂದ ಬಿಡುಗಡೆಯಾಗಿದ್ದ ರಾಮದಾಸ್ ಶನಿವಾರ ಮರಳಿ ಕರ್ತವ್ಯಕ್ಕೆ ಹಾಜರಾದರು.

ಪೌರಾಯುಕ್ತ ರಾಮದಾಸ್ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಆ.28ರಂದು ಹುದ್ದೆಯಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದರು. ಡಿಸಿ ಆದೇಶದಿಂದಾಗಿ ರಾಮದಾಸ್ ಕರ್ತವ್ಯದಿದ ಬಿಡುಗಡೆಯಾಗಿದ್ದರು. ಈ ಹುದ್ದೆಗೆ ಬೇರೆ ಅಧಿಕಾರಿ ನಿಯೋಜನೆಗೊಳ್ಳುತ್ತಾರೆ ಎನ್ನುವುದರೊಳಗೆ ರಾಮದಾಸ್ ಮರಳಿ ಕರ್ತವ್ಯಕ್ಕೆ ಹಾಜರಾದರು. ಶನಿವಾರ ನಗರಸಭೆ ಕಚೇರಿಗೆ ಆಗಮಿಸಿದ ರಾಮದಾಸ್ ಪೌರಾಯುಕ್ತರ ಕಚೇರಿಯಲ್ಲಿ ಕುಳಿತರು.

ಕರ್ತವ್ಯದಿಂದ ಬಿಡುಗಡೆ ಮಾಡಿದ್ದ ಡಿಸಿ:

ಪೌರಾಯುಕ್ತ ರಾಮದಾಸ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಮಾಡಿದ್ದರು. ಆದೇಶದಲ್ಲಿ ನಗರಸಭೆಯ ವಿವಿಧ ಶಾಖೆಗಳ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ನ್ಯಾಯಾಲಯದ ಪ್ರಕರಣಗಳನ್ನು ನಿರ್ವಹಿಸಲು ವಿಫಲರಾಗಿರುವುದನ್ನು ಪ್ರಮುಖವಾಗಿ ತಿಳಿಸಲಾಗಿದೆ.

ಹೀಗೆ ಒಟ್ಟು 21 ಕಾರಣಗಳನ್ನು ನೀಡಿರುವ ಡಿಸಿ ಶಿಲ್ಪಾನಾಗ್ ಅಂತಿಮವಾಗಿ ಜವಾಬ್ದಾರಿಯುತವಾದ ಪೌರಾಯುಕ್ತ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸಲು ರಾಮದಾಸ್ ವಿಫಲರಾಗಿ ಕರ್ತವ್ಯಲೋಪವೆಸಗಿರುವುದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶಿಸಿದ್ದಾರೆ. ಸ್ಥಳ ನಿಯುಕ್ತಿಗಾಗಿ ಮಾತೃ ಇಲಾಖೆಯಾಗಿರುವ ತೋಟಗಾರಿಕೆ ಇಲಾಖೆಯ ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ಜತೆಗೆ ನಗರಸಭೆ ಅಧ್ಯಕ್ಷ ಸುರೇಶ್ ಕೂಡ ಡಿಸಿಗೆ ದೂರು ನೀಡಿ ಕೌನ್ಸಿಲ್ ಸಭೆಯಲ್ಲಿ ನಡಾವಳಿಯ ಕಾಮಗಾರಿಯ ಬದಲು ಬೇರೆ ಕಾಮಗಾರಿಗೆ ನಕಲಿ ನಡಾವಳಿಯನ್ನು ಸಲ್ಲಿಸಿ ಕ್ರಿಯಾ ಯೋಜನೆಗೆ ಅನುಮೋದನೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದರು.

ವಿರೋಧಿಸಿ ಪ್ರತಿಭಟನೆ:

ಕರ್ತವ್ಯಲೋಪದಡಿ ಬಿಡುಗಡೆಯಾಗಿದ್ದ ಪೌರಾಯುಕ್ತ ರಾಮದಾಸ್ ಮರಳಿ ಇದೇ ಹುದ್ದೆಗೆ ಬರಲು ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ ಯುವ ಸೇನೆ ಕರ್ನಾಟಕ ಸೇವಾ ಸಂಘದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಶನಿವಾರವೂ ನಗರಸಭೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಾಮದಾಸ್ ಅವರು ಮತ್ತೆ ಅಧಿಕಾರವನ್ನು ವಹಿಸಿಕೊಂಡಿರುವ ವಿರುದ್ಧ ವಿವಿಧ ೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಪೌರಾಯುಕ್ತ ಹುದ್ದೆಯಲ್ಲಿ ಮುಂದುವರೆದಿದ್ದೇನೆ. ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದೇನೆ. ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಹೆಚ್ಚು-ಕಡಿಮೆ ಏನೇ ಇದ್ದರೂ ಸರಿಪಡಿಸಿಕೊಂಡು ಸಾರ್ವಜನಿಕರ ಸೇವೆ ಮಾಡುತ್ತೇನೆ.

-ರಾಮದಾಸ್, ಪೌರಾಯುಕ್ತ, ನಗರಸಭೆ ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net