ನಗರಸಭೆ ಸದಸ್ಯನಿಂದ ಸಂಘರ್ಷಕ್ಕೆ ಪ್ರಚೋದನೆ ಆರೋಪ

Published on

ಚಾಮರಾಜನಗರ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಶೂ ಎಸೆದ ಪ್ರಕರಣ ಖಂಡಿಸಿ ಅ.18ರಂದು ಕರೆ ನೀಡಿದ್ದ ಸ್ವಯಂಪ್ರೇರಿತ ಚಾಮರಾಜನಗರ ಬಂದ್ ಕುರಿತು ನಗರಸಭೆ ಸದಸ್ಯ ಶಿವರಾಜ್ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದರು. ಇವರ ಪೊಲೀಸರು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯ ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು.

ಬಂದ್‌ಗೆ ಹಿಂದಿನ ದಿನ ನಮ್ಮ ವಿರುದ್ಧ ಪಿತೂರಿ ಮಾಡಲಾಯಿತು. ನಗರಸಭೆ ಸದಸ್ಯ ಶಿವರಾಜ್ ಪ್ರಚೋದನಾಕಾರಿಯಾಗಿ ಸ್ಟೇಟಸ್ ಹಾಕಿದ್ದರು. ಬಿಜೆಪಿ ಮುಖಂಡ ನಟರಾಜು ಸರ್ಕಾರದ ಕಟ್ಟಡವಾಗಿರುವ ನಗರಸಭೆ ಬಿಲ್ಡಿಂಗ್‌ನಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಬಂದ್ ದಿನ ಬೆಂಬಲ ಕೋರಿದರೆ ಅಂದು ನಡೆಯಲಿದ್ದ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಸಮವಸ ವಿತರಿಸಬೇಕೆಂದು ಆಕ್ಷೇಪ ವ್ಯಕ್ತಪಡಿಸಿದರು. ಇವರ ನಡವಳಿಕೆಗಳು ಸಂವಿಧಾನ ರಕ್ಷಣೆಯ ವಿರುದ್ಧವಾಗಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಂದ್ ವೇಳೆ ಅಂಗಡಿ ಮಾಲೀಕ ಅಜಿತ್‌ನಿಗೆ ಹಲ್ಲೆ ಮಾಡಿದ ವಿಡಿಯೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಇದರ ಹಿಂದೆ ಬಿಜೆಪಿ ಮುಖಂಡ ಬಾಲಸುಬ್ರಮಣ್ಯಂ ಪಾತ್ರವಿದೆ. ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ನಾವೂ ಸಹ ದೂರು ನೀಡಲು ನಿರ್ಧರಿಸಿದ್ದೆವು. ಆದರೆ ಮಾತುಕತೆಯ ಮೂಲಕ ಇತ್ಯರ್ಥ ಮಾಡಿಕೊಳ್ಳಲಾಯಿತು. ಬಂದ್‌ಗೆ ನಾಯಕ ಸಮುದಾಯದಿಂದ ಬೆಂಬಲ ನೀಡಲಾಗಿತ್ತು. ನಾಯಕ ಸಮುದಾಯದ ಮುಖಂಡನಿಂದ ಸುದ್ದಿಗೋಷ್ಠಿ ಮಾಡಿಸಿ ಎಸ್ಸಿ-ಎಸ್ಟಿ ನಡುವೆ ಸಂಘರ್ಷ ಮಾಡಿಸಲು ಹುನ್ನಾರ ಮಾಡಲಾಗುತ್ತಿದೆ.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ನಲ್ಲೂರು ಸೋಮೆಶ್ವರ್ ಮಾತನಾಡಿ, ನಗರಸಭೆ ಸದಸ್ಯ ಶಿವರಾಜ್ ಸಾಮಾಜಿಕ ಜಾಲತಾಣದಲ್ಲಿ ಕೋಮು ಸಂಘರ್ಷವಾಗಬೇಕೆಂದು ಪ್ರಚೋದನಾಕಾರಿ ಹೇಳಿಕೆ ಹಾಕಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ನೀಡಿದ್ದೇವೆ. ಶೀಘ್ರವಾಗಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಮಹದೇವ್ ಮಾತನಾಡಿ, ಬಂದ್‌ಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು. ಗೋಷ್ಠಿಯಲ್ಲಿ ಮುಖಂಡರಾದ ನಾಗಯ್ಯ, ರಂಗಸ್ವಾಮಿ, ಸೋಮಣ್ಣ, ನಾಗರಾಜು, ಗೋವಿಂದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net