

ಮಡಿಕೇರಿ: ನಗರದ ಮಾರುಕಟ್ಟೆ ಆವರಣದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಆರೋಪಿಸಿ ಮೀನು, ಕೋಳಿ, ಕುರಿ, ಮಾಂಸ ಮಾರಾಟಗಾರರು ಗುರುವಾರ ನಗರದ ಮಾಂಸದ ಮಾರುಕಟ್ಟೆ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ಮಾರುಕಟ್ಟೆಗೆ ಜಮಾಯಿಸಿದ ಪ್ರತಿಭಟನಾಕಾರರು, ಫಲಕಗಳನ್ನು ಹಿಡಿದು ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯಿಂದ ತಾತ್ಕಾಲಿಕವಾಗಿ ಮೀನು ಮಾರುಕಟ್ಟೆಯನ್ನು ತೆರೆಯಲಾಗಿದ್ದು, ಮಳಿಗೆಯನ್ನು ಲಕ್ಷಾಂತರ ರೂ.ಗೆ ಹರಾಜು ಮಾಡಲಾಗುತ್ತಿದೆ. ನಗರಸಭೆಯಿಂದ ತಾತ್ಕಾಲಿಕವಾಗಿ ಮೀನು ಮಾರುಕಟ್ಟೆಯನ್ನು ತೆರೆದು ಲಕ್ಷಾಂತರ ರೂ.ಗೆ ಹರಾಜು ಮಾಡಲಾಗುತ್ತಿದೆ. ಕಾನೂನಿನ ವಿರುದ್ಧವಾಗಿ ನಡೆಯುವ ಇಲ್ಲಿನ ವ್ಯವಸ್ಥೆಯ ಬಗ್ಗೆ ಮಾತನಾಡಿದರೆ ಮಾರಾಟಗಾರರಿಗೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಅಶುಚಿತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಇದೇ ರೀತಿ ಮುಂದುವರಿದಲ್ಲಿ ಕರೊನಾ ವೈರಸ್ ಇಲ್ಲಿ ಪತ್ತೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾರಾಟಗಾರ ಫಾರೂಕ್ ಅಸಮಾಧಾನವ್ಯಕ್ತಪಡಿಸಿದರು.
ಕಳೆದ 35 ವರ್ಷಗಳಿಂದ ಅದೇ ಜಾಗದಲ್ಲಿ ಕಸಾಯಿಖಾನೆ ಇದೆ. ಆ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತೇವೆಂದು ಹೇಳಿ 8 ವರ್ಷ ಕಳೆದರೂ ಈವರೆಗೂ ಭರವಸೆ ಈಡೇರಿಲ್ಲ. ಅಲ್ಲದೆ ತಾತ್ಕಾಲಿಕ ಮಳಿಗೆಗಳು ಕುಸಿಯುವ ಸ್ಥಿತಿಯಲ್ಲಿದ್ದು, ಮಾರಾಟಗಾರರು ಭಯದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ತ್ಯಾಜ್ಯವನ್ನು ತುಂಬಿ ನಗರಸಭೆ ಎದುರು ಅನಿರ್ದಿಷ್ಟವಾಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಗರಸಭೆ ಮಾಜಿ ಸದಸ್ಯ ಕೆ.ಜೆ.ಪೀಟರ್ ಮಾತನಾಡಿ, ಮಾಂಸದ ಮಾರುಕಟ್ಟೆ ಬಳಿಯಿರುವ ಕೆಲ ಮಳಿಗೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಬೀಳುವ ಸ್ಥಿತಿಯಲಿವೆ. ತ್ಯಾಜ್ಯ ಹಾಕಲು ಯಾವುದೇ ವ್ಯವಸ್ಥೆ ಇಲ್ಲ. ತ್ಯಾಜ್ಯ ಹಾಗೂ ಮಾಂಸದ ನೀರನ್ನು ಹಾಗೆ ಹರಿ ಟ್ಟಿರುವುದರಿಂದ ರೋಗರುಜಿನ ಹರಡುವ ಭೀತಿ ನಿರ್ಮಾಣವಾಗಿದೆ. ಕಳೆದ 6-7 ವರ್ಷಗಳಿಂದ ಮಾರಾಟಗಾರರಿಗೆ ಮೂಲಸೌಲಭ್ಯ ನೀಡಿಲ್ಲ. ಹೈಟೆಕ್ ಮಾರುಕಟ್ಟೆ ಮಾಡಿದ್ದರೂ ವ್ಯಾಪಾರಸ್ಥರಿಗೆ ತೊಂದರೆ ತಪ್ಪಿಲ್ಲ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಹೈಟೆಕ್ ಮಾರುಕಟ್ಟೆ ಕಟ್ಟಡದ ಕೆಲಭಾಗದಲ್ಲಿ ಪಾರ್ಕಿಂಗ್ ಹಾಗೂ ಮಾಂಸ ಮಾರುಕಟ್ಟೆ ಆಗಬೇಕಿತ್ತು. ಆದರೆ ಆ ಕೆಲಸ ಆಗದ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಳಿಗೆಗಳಲ್ಲಿ ಮೀನು-ಮಾಂಸ ಮಾರಾಟ ಮಾಡಲು ಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇಂದಿಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನಗರಸಭೆ ಅಧಿಕಾರಿಗಳು ಮಾರುಕಟ್ಟೆಯನ್ನು ಕಡೆಗಣಿಸಿದ್ದು, ಇದರಿಂದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಮೀನು ಮಾಂಸದ ತ್ಯಾಜ್ಯವನ್ನು ರಸ್ತೆಗೆ ಬಿಸಾಡುತ್ತಿರುವುದರಿಂದ ಸಾರ್ವಜನಿಕರು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಮಾರಾಟಗಾರರ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ವಕ್ತಾರ ಮುನೀರ್ ಅಹ್ಮದ್, ಮಾರುಕಟ್ಟೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಯಾಕುಬ್, ಆದರ್ಶ್ ಮತ್ತಿತರರು ಪಾಲ್ಗೊಂಡಿದ್ದರು.