

ಹಾಸನ:ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಪೌರ ಕಾರ್ಮಿಕರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ನಗರಸಭೆ ಸದಸ್ಯರು ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು. ಈ ವೇಳೆ ಒಳನುಗ್ಗಲು ಮುಂದಾದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು.
ನಗರಸಭೆ ಮುಂಭಾಗ ಸದಸ್ಯರು ಮತ್ತು ಪೌರಕಾರ್ಮಿಕರು ಜಿಲ್ಲಾಡಳಿತದ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗುತ್ತಿದ್ದರು. ನಂತರ ದೇವಸ್ಥಾನದ ಒಳಭಾಗ ಪ್ರವೇಶಿಸಲು ಮುಂದಾದರು. ಆ ಸಂದರ್ಭದಲ್ಲಿ ಬ್ಯಾರಿಕೇಟ್ ತಳ್ಳಿ ಮುಂದೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿ ವಿಫಲರಾದರು. ನಂತರ ಪೊಲೀಸರು ಅವರನ್ನು ನಿಯಂತ್ರಿಸಲು ಲಘು ಲಾಠಿ ಚಾರ್ಜ್ ನಡೆಸಿದರು.
ಬುಧವಾರ ದೇವಸ್ಥಾನದ ರಸ್ತೆಯಲ್ಲಿ ನಮಗೆ ದೇವಿ ದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ. ದರ್ಶನಕ್ಕೆ ಅವಕಾಶ ನೀಡದಿದ್ದರೆ ಪ್ರತಿಭಟನೆ ಮಾಡುವುದಾಗಿ ಬುಧವಾರ ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸದೆ ಇರುವುದರಿಂದ ಪೌರಕಾರ್ಮಿಕರ ಮತ್ತು ಸದಸ್ಯರು ಬೀದಿಗೆ ಇಳಿದು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಸ್ವಚ್ಛತೆಯಿಂದ ಹೊರಗುಳಿದ ಪೌರಕಾರ್ಮಿಕರು:
ಪೌರಕಾರ್ಮಿಕರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಮತ್ತು ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಕ್ರಮವನ್ನು ಖಂಡಿಸಿ ನಗರಸಭೆಯ ಎಲ್ಲ ಪೌರಕಾರ್ಮಿಕರು ಜಾತ್ರೋತ್ಸವದಲ್ಲಿ ಯಾವುದೇ ಸ್ವಚ್ಛತಾ ಕೆಲಸ ಮಾಡುವುದಿಲ್ಲ ಎಂದು ಬಹಿಷ್ಕರಿಸಿದರು.
ಕಳೆದ ಆರು ದಿನಗಳಿಂದ ನಗರಸಭೆ ಪೌರಕಾರ್ಮಿಕರು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅವರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದರಿಂದ ಸ್ವಚ್ಛತೆ ಮಾಡುವುದನ್ನು ಬಹಿಷ್ಕರಿಸಿದ್ದೇವೆ. ಇಂದಿನಿಂದ ಯಾವೊಬ್ಬ ಪೌರಕಾರ್ಮಿಕರೂ ಕೂಡ ಸ್ವಚ್ಛತೆ ಮಾಡುವುದಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದರು.
ಶೌಚಾಲಯದಲ್ಲಿ ನೀರಿಲ್ಲ:
ಪೌರಕಾರ್ಮಿಕರು ಮತ್ತು ನಗರಸಭೆ ಸಿಬ್ಬಂದಿ ಕೆಲಸ ಬಹಿಷ್ಕರಿಸಿರುವುದರಿಂದ ದೇವಸ್ಥಾನದ ಆವರಣದಲ್ಲಿ ಕಸದ ರಾಶಿ ಬಿದ್ದಿದೆ. ಮಧ್ಯಾಹ್ನ ಮಳೆ ಸುರಿದ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣ ಕೆಸರು ಮಯವಾಗಿತ್ತು. ಅಲ್ಲದೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೇಗುಲದ ಸುತ್ತಮುತ್ತ ಶೌಚಾಲಯಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳಿಗೆ ಸರಿಯಾದ ನೀರಿನ ವ್ಯವಸ್ಥೆಯನ್ನು ನಗರಸಭೆ ಸಿಬ್ಬಂದಿ ಕಲ್ಪಿಸದೆ ಇರುವುದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಸ್ಕೌಟ್ಸ್ ಆ್ಯಂಡ್ ಗೈಡ್ ಮಕ್ಕಳಿಂದ ಸ್ವಚ್ಛತೆ
ಪೌರಕಾರ್ಮಿಕರು ಕೆಲಸವನ್ನು ಬಹಿಷ್ಕರಿಸಿರುವುದರಿಂದ ದೇಗುಲದ ಆವರಣವನ್ನು ಗುರುವಾರ ಸಂಜೆ ಸ್ಕೌಟ್ಸ್ ಆ್ಯಂಡ್ ಗೈಡ್ ಮಕ್ಕಳಿಂದ ಕಸ ಗುಡಿಸಿ, ಕಸ ಎತ್ತಿಸುವ ಕೆಲಸ ಮಾಡಿಸಲಾಯಿತು.
ಸರತಿ ಸಾಲಿನಲ್ಲಿ ಭಕ್ತರನ್ನ ಬಿಡುವುದು, ಕುಡಿಯುವ ನೀರನ್ನು ಪೂರೈಕೆ ಮಾಡಲು ಸ್ವಯಂ ಪ್ರೇರಿತರಾಗಿ ನೂರಾರು ಸ್ಕೌಟ್ಸ್ ಆ್ಯಂಡ್ ಗೈಡ್ ವಿದ್ಯಾರ್ಥಿಗಳು ರಾಜ್ಯದ ನಾನಾ ಭಾಗದಿಂದ ಆಗಮಿಸಿದ್ದಾರೆ. ಪೌರಕಾರ್ಮಿಕರು ಕರ್ತವ್ಯಕ್ಕೆ ಗೈರು ಹಾಜರಾಗಿರುವುದರಿಂದ ವಿದ್ಯಾರ್ಥಿಗಳ ಕೈಯಲ್ಲಿ ಸ್ವಚ್ಛತೆ ಮಾಡಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.