

ಗದಗ: 2018ರಲ್ಲಿ ಸರ್ಕಾರ ಘೊಷಿಸಿದ್ದ ಗದಗ- ಬೆಟಗೇರಿ ನಗರಸಭೆ ವಾರ್ಡ್ವಾರು ಮೀಸಲಾತಿ ಪಟ್ಟಿ ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ನಗರಸಭೆ ಚುನಾವಣೆ ಪ್ರಕ್ರಿಯೆಗೆ ಮತ್ತೆ ಗ್ರಹಣ ಹಿಡಿಯುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಘೊಷಿಸಿರುವ ವಾರ್ಡ್ವಾರು ಮೀಸಲಾತಿ ಹಂಚಿಕೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿ 9ನೇ ವಾರ್ಡ್ ನಿವಾಸಿ ಮಂಜುನಾಥ ಬಳ್ಳಾರಿ, ರಾಘವೇಂದ್ರ ಯಳವತ್ತಿ ಮತ್ತಿತರರು ಧಾರವಾಡ ಹೈಕೋರ್ಟ್ ಪೀಠದ ಮೊರೆ ಹೋಗಿದ್ದಾರೆ.
2018ರಲ್ಲಿ ಅಂದಿನ ಸರ್ಕಾರ ಪ್ರಕಟಿಸಿದ ನಗರಸಭೆ ವಾರ್ಡ್ವಾರು ಮೀಸಲಾತಿ ಪಟ್ಟಿ ಸರಿಯಾಗಿಲ್ಲ. ಅದನ್ನು ರದ್ದು ಗೊಳಿಸಬೇಕು ಎಂದು ನಗರಸಭೆ ಮಾಜಿ ಸದಸ್ಯರ ಬೆಂಬಲಿಗರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇತ್ತೀಚೆಗೆ ಅವರು ಸ್ವಯಂಪ್ರೇರಣೆಯಿಂದ ಅರ್ಜಿಯನ್ನು ವಾಪಸ್ ಪಡೆದಿದ್ದರು. ಇದರಿಂದ ರಾಜ್ಯ ಚುನಾವಣೆ ಆಯೋಗವು ಜಿಲ್ಲಾಡಳಿತಕ್ಕೆ ಪತ್ರ ಬರೆದು, ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಸೇರಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಆದರೆ, ವಾರ್ಡ್ವಾರು ಮೀಸಲಾತಿ ಪಟ್ಟಿ ಪ್ರಶ್ನಿಸಿ ಅ. 12 ರಂದು ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದರಿಂದ ನಗರಸಭೆಗೆ ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕ್ಷೀಣಿಸಿದೆ. ನಗರಸಭೆ ಚುನಾವಣೆ ನಡೆಯಲಿವೆ ಎಂದು ಕಾದುಕುಳಿತಿದ್ದ ಸ್ಪರ್ಧಾಕಾಂಕ್ಷಿಗಳ ಆಸೆಗೆ ಇದರಿಂದ ತಣ್ಣೀರು ಎರೆಚಿದಂತಾಗಿದೆ.
ಬಿಜೆಪಿ ನಾಯಕರಿಗೆ ನಿರಾಸಕ್ತಿ...
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗದಗ - ಬೆಟಗೇರಿ ಅವಳಿ ನಗರ ವ್ಯಾಪ್ತಿಯ ಮತದಾರರು ಬಿಜೆಪಿಗೆ 10 ಸಾವಿರ ಮತಗಳ ಮುನ್ನಡೆ ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ಬೆವರಿಳಿಸಿದ್ದರು. ವಿಧಾನಸಭೆ ಚುನಾವಣೆ ನಂತರ ನಡೆದ ಲೋಕಸಭೆ ಚುನಾವಣೆಯಲ್ಲೂ ಅವಳಿ ನಗರದ ಮತದಾರರು 15 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದರು. ಅವಳಿ ನಗರ ಬಿಜೆಪಿಗೆ ಪೂರಕವಾಗಿದ್ದರೂ ಬಿಜೆಪಿಗರಲ್ಲಿ ಅಷ್ಟೊಂದು ಉತ್ಸಾಹ ಕಾಣಿಸುತ್ತಿಲ್ಲ. ಪಕ್ಷದೊಳಗಿನ ಬಣ ರಾಜಕೀಯ, ಓಲೈಕೆ ರಾಜಕಾರಣದಿಂದ ಭಾರಿ ಹೊಡೆತ ಬೀಳತೊಡಗಿದೆ. ಮುಖಂಡರು, ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡಿದರೆ 35 ವಾರ್ಡ್ ಗಳ ಪೈಕಿ 20 ವಾರ್ಡ್ಗಳಲ್ಲಿ ಗೆಲುವು ಸಾಧಿಸಬಹುದು. ಆದರೆ, ನಾಯಕರು ಈ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ನಗರಸಭೆ ಚುನಾವಣೆಯನ್ನೇ ನಿರ್ಲಕ್ಷಿಸುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿಬರುತ್ತಿರುತ್ತಿವೆ.
ಕಾಂಗ್ರೆಸ್ಗೆ ಪೂರಕ ಮೀಸಲಾತಿ!
ಕಳೆದ ಚುನಾವಣೆಯಲ್ಲಿ 35 ವಾರ್ಡ್ಗಳ ಪೈಕಿ 22 ವಾರ್ಡ್ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈ ಸಲ ವಾರ್ಡ್ಗಳ ಪರಿಷ್ಕರಣೆಯಾಗಿದೆ. ಅಲ್ಲದೆ, ಮೀಸಲಾತಿ ಬದಲಾಗಿದ್ದರಿಂದ ಹಾಲಿ ಅನೇಕ ಸದಸ್ಯರಿಗೆ ಸ್ಪರ್ಧಿಸಲು ವಾರ್ಡ್ಗಳು ಇಲ್ಲದಂತಾಗಿದೆ. ಆದರೆ, ಕಾಂಗ್ರೆಸ್ನ ಕೆಲ ಪ್ರಭಾವಿಗಳು ಮಾತ್ರ ತಮಗೆ ಅನುಕೂಲಕರ ಮೀಸಲಾತಿ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 2, 4, 13, 16, 17, 18, 23, 25, 29, 33 ಮತ್ತು 34ನೇ ವಾರ್ಡ್ಗಳಲ್ಲಿರುವ ಕಾಂಗ್ರೆಸ್ ಆಕಾಂಕ್ಷಿಗಳು ತಮಗೆ ಬೇಕಾಗಿರುವ ಮೀಸಲಾತಿಯನ್ನು ತರುವಲ್ಲಿ ಸಫಲರಾಗಿದ್ದಾರೆ. ಉಳಿದ ವಾರ್ಡ್ಗಳ ಪೈಕಿ ಬಹುತೇಕ ವಾರ್ಡ್ಗಳು ಮಹಿಳೆಯರಿಗೆ ಮೀಸಲಾಗಿವೆ. ಹೀಗಾಗಿ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಈ ಮೀಸಲಾತಿ ನುಂಗಲಾರದ ತುತ್ತಾಗಿದೆ. ಅಲ್ಲದೆ, ಪರಿಶಿಷ್ಟ ಜಾತಿ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ಸಾಮಾನ್ಯ ವರ್ಗ ಮೀಸಲು ಮಾಡಿರುವುದು, ಮುಂದುವರಿದ ಸಮಾಜದ ಜನರು ವಾಸಿಸುವ ಪ್ರದೇಶಗಳಲ್ಲಿ ಮಹಿಳಾ ವರ್ಗಕ್ಕೆ ಮೀಸಲಾತಿ ನೀಡಿ ಪ್ರಬಲ ಮುಖಂಡರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದಲ್ಲದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗದಗ- ಬೆಟಗೇರಿಯ 35 ವಾರ್ಡ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದ್ದು, ಶತಾಯಗತಾಯ ನಗರಸಭೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬ ಕಾರಣದಿಂದ ಕಾಂಗ್ರೆಸ್ ಮುಖಂಡರು ತಮಗಿಷ್ಟ ಬಂದಂತೆ ಮೀಸಲಾತಿ ಹಂಚಿಕೆ ಮಾಡಿಸಿಕೊಂಡಿದ್ದಾರೆ ಎಂದು ಮಾತುಗಳು ಸಹ ಅವಳಿನಗರದಲ್ಲಿ ಕೇಳಿಬರುತ್ತಿದೆ.