

ಚಿಕ್ಕಬಳ್ಳಾಪುರ : ನಗರಸಭೆ ಚುನಾವಣೆಗೆ ಭಾರತೀಯ ಜನಾತಾ ಪಾರ್ಟಿ ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಚಿಕ್ಕಬಳ್ಳಾಪುರ ನಗರ ನವ ನಿರ್ಮಾಣ ಭರವಸೆ ನೀಡಿದೆ.
ವಿಧಾನಸಭೆ ಉಪ ಚುನಾವಣೆಗೂ ಹಲವು ಭರವಸೆಗಳನ್ನು ನೀಡಲಾಗಿತ್ತು. ಇದೀಗ 10 ಪುಟಗಳ ಪ್ರಣಾಳಿಕೆಯಲ್ಲಿ ಸ್ಮಾರ್ಟ್‌ಸಿಟಿ, ಎಲ್ಲರಿಗೂ ಸೂರು, ಶಿಕ್ಷಣ, ಮಹಿಳಾ ಮತ್ತು ಯುವ ಸಬಲೀಕರಣ, ನಗರ ಸ್ವಚ್ಛತೆ, ಆರೋಗ್ಯ, ಕ್ರೀಡೆ, ಮೂಲ ಸೌಕರ್ಯ ಒದಗಿಸುವ ನಾನಾ ಕೊಡುಗೆಗಳನ್ನು ಸಾರಿದೆ.ಪತ್ರಕರ್ತರ ಭವನದಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಶಾಸಕ ಡಾ ಕೆ.ಸುಧಾಕರ್, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು ನಗರಸಭಾ ಚುನಾವಣೆಯಲ್ಲಿಯೂ ಸ್ವಪಕ್ಷೀಯ ಅಭ್ಯರ್ಥಿಗಳು ಹೆಚ್ಚು ಗೆದ್ದರೆ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಚಿಕ್ಕಬಳ್ಳಾಪುರವನ್ನು ಸುಂದರ, ಸುರಕ್ಷಿತ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉಪ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಹಂತ ಹಂತವಾಗಿ ಎಲ್ಲ ಬಡಾವಣೆಗಳ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಅಂಡರ್ ಗ್ರೌಂಡ್ ಪವರ್ ಕೇಬಲ್ ಅಳವಡಿಕೆ, ಉದ್ಯೋಗಾವಕಾಶಕ್ಕಾಗಿ ಕೌಶಲಾಭಿವೃದ್ಧಿ ತರಬೇತಿ ಸೇರಿ ಹಲವು ಪ್ರಗತಿದಾಯಕ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮಾಜಿ ಶಾಸಕ ಎಂ.ಶಿವಾನಂದ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮುಖಂಡ ಮರಳುಕುಂಟೆ ಕೃಷ್ಣಮೂರ್ತಿ ಇತರರಿದ್ದರು.
ಪ್ರಮಾಣ ವಚನಕ್ಕೆ ಆಹ್ವಾನ : ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮನ್ನು ಆಹ್ವಾನಿಸಿದ್ದಾರೆ ಎಂದು ಶಾಸಕ ಡಾ ಕೆ.ಸುಧಾಕರ್ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯದಲ್ಲಿ ಅನೇಕರು ಮಾತುತಪ್ಪಿ ನಡೆಯುತ್ತಾರೆ, ಆದರೆ, ಆಂತರಿಕ ಸಮಸ್ಯೆ ಮತ್ತು ಒತ್ತಡಗಳಿದ್ದರೂ ಯಡಿಯೂರಪ್ಪ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಸಚಿವ ಸಂಪುಟದಲ್ಲಿ ಸಮರ್ಥರಿರಬೇಕು. ಹೊಸ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಉತ್ತಮ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.