

ಹಾಸನ: ಗುರುವಾರ ನಿಗದಿಯಾಗಿದ್ದ ನಗರಸಭೆ ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡಿದ ಚುನಾವಣಾಧಿಕಾರಿ ಬಿ.ಎ.ಜಗದೀಶ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಪ್ರೀತಂಗೌಡ, ಇದೇನು ಕುಂಟಬಿಲ್ಲೆ ಆಟಾನಾ? ಎಂದು ಅಸಮಾಧಾನ ಹೊರಹಾಕಿದರು.
ನಮ್ಮ ಪಕ್ಷದ ಸದಸ್ಯರೇ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ. ಎರಡೂ ಸ್ಥಾನಗಳಿಗೆ ಕೇವಲ ನಮ್ಮ ಪಕ್ಷದ ಸದಸ್ಯರು ಮಾತ್ರವೇ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆಯಾಗುವುದು ಮಾತ್ರ ಬಾಕಿಯಿದೆ. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಗೊಂದಲ ಸೃಷ್ಟಿಸಿ ಚುನಾವಣಾಧಿಕಾರಿ ಚುನಾವಣೆ ಮುಂದೂಡುವಂತೆ ಮಾಡಿದ್ದಾರೆ. ಮುಂದೆ ಕಾನೂನು ಚೌಕಟ್ಟಿನಲ್ಲಿ ಯಾವ ರೀತಿ ಚುನಾವಣೆ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ನಿಯಮ ಪ್ರಕಾರ ಚುನಾವಣೆ ಮಾಡಿದ್ದರೇ ಬಿಜೆಪಿ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕಾಗಿತ್ತು. ಚುನಾವಣಾಧಿಕಾರಿ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿರುವುದರಿಂದ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ನಾನು ಎಂದು ಭವಿಷ್ಯ ಹೇಳುವುದಿಲ್ಲ, ಹಿಂದೆಯೇ ಹೇಳಿದಂತೆ ನಮ್ಮ ಅಭ್ಯರ್ಥಿಯೇ ಉಪಾಧ್ಯಕ್ಷರಾಗುವುದು ನಿಶ್ಚಿತ ಎಂದರು.