

ಹಾಸನ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾನಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಅಧ್ಯಕ್ಷರಾಗಿ ಚಂದ್ರೇಗೌಡ, ಉಪಾಧ್ಯಕ್ಷರಾಗಿ ಬಿಜೆಪಿಯ ಲತಾ ಸುರೇಶ್ ಆಯ್ಕೆಯಾಗಿದ್ದಾರೆ.
ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ನಾನಾ ತಿರುವುಗಳು ಮತ್ತು ರಾಜಕೀಯ ಲೆಕ್ಕಾಚಾರಗಳ ನಡುವೆಯೂ ಅಂತಿಮವಾಗಿ ಜೆಡಿಎಸ್ ಪಕ್ಷ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಯಿತು. ಇನ್ನು ಬಿಜೆಪಿ ಪಕ್ಷಕ್ಕೆ ಬಿಟ್ಟುಕೊಟ್ಟಂತೆ ಉಪಾಧ್ಯಕ್ಷ ಸ್ಥಾನವನ್ನು ನೀಡಿ ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ದಳಪತಿಗಳು ಯಶಸ್ವಿಯಾಗುವ ಮೂಲಕ ಬಿಜೆಪಿಗೆ ಆಘಾತ ನೀಡಿದರು.
ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ಕು ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಚಂದ್ರೇಗೌಡ, ಗಿರೀಶ್ ಚನ್ನವೀರಪ್ಪ, ಅಮೀರ್ ಜಾನ್, ಕಾಂಗ್ರೆಸ್‌ನಿಂದ ರೋಹಿಂತಾಜ್ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಗಿರೀಶ್ ಚನ್ನವೀರಪ್ಪ ಮತ್ತು ಅಮೀರ್ ಜಾನ್ ಅವರು ನಾಮಪತ್ರ ಹಿಂಪಡೆಯುವ ಮೂಲಕ ಕಣದಿಂದ ಹಿಂದೆ ಸರಿದರು. ಅಂತಿಮವಾಗಿ ಚಂದ್ರೇಗೌಡ ಮತ್ತು ರೋಹಿಂತಾಜ್ ಕಣದಲ್ಲಿ ಉಳಿದರು. ಚಂದ್ರೇಗೌಡರಿಗೆ 34 ಮತ ಮತ್ತು ರೋಹಿಂ ತಾಜ್ ಅವರಿಗೆ ಎರಡು ಮತಗಳು ಚಲಾವಣೆಯಾದವು. ಚುನಾವಣೆ ಅಧಿಕಾರಿಗಳು ಚಂದ್ರೇಗೌಡರ ಆಯ್ಕೆ ಘೋಷಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಎಲ್ಲ ಸದಸ್ಯರು ಜೆಡಿಎಸ್ ಅಭ್ಯರ್ಥಿ ಪರ ಕೈ ಎತ್ತುವ ಮೂಲಕ ಮತ ಚಲಾಯಿಸಿದರು.
ನಂತರ ನಡೆದ ಉಪಾಧ್ಯಕ್ಷ ಸ್ಥಾನದಲ್ಲಿ ಒಟ್ಟು ನಾಲ್ವರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಜೆಡಿಎಸ್‌ನಿಂದ ಹೇಮಲತಾ, ಗೌಸಿಯ ಅಲ್ಮಾಸ್, ಬಿಜೆಪಿಯಿಂದ ಕೆ. ಲತಾ ಸುರೇಶ್ ಮತ್ತು ಶಿಲ್ಪಾ ವಿಕ್ರಂ ಅವರು ತಮ್ಮ ಉಮೇದುಗಾರಿಕೆ ಸಲ್ಲಿಸಿದರು. ನಂತರ ಜೆಡಿಎಸ್‌ನ ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದುಕೊಂಡರು. ಅಂತಿಮವಾಗಿ ಬಿಜೆಪಿಯ ಲತಾ ಮತ್ತು ಶಿಲ್ಪಾ ಇಬ್ಬರು ಕಣದಲ್ಲಿ ಉಳಿದರು. ಈ ಸಂದರ್ಭದಲ್ಲಿ ಶಿಲ್ಪಾ ಪರವಾಗಿ 14 ಮತಗಳು ಬಂದರೆ, ಲತಾ ಸುರೇಶ್ ಪರವಾಗಿ 21 ಮತಗಳು ಚಲಾವಣೆಯಾದವು. ವಿಪರ್ಯಾಸವೆಂದರೆ ಲತಾ ಸುರೇಶ್ ಅವರು ತಮ್ಮ ವಿರುದ್ಧವೇ ಮತ ಹಾಕಿಕೊಂಡು ಆನಂತರ ಜೆಡಿಎಸ್ ಎಲ್ಲ ಸದಸ್ಯರು ಲತಾ ಸುರೇಶ್ ಅವರ ಪರವಾಗಿ ಕೈ ಎತ್ತುವ ಮೂಲಕ ಲತಾ ಸುರೇಶ್ ಅವರನ್ನು ಆಯ್ಕೆ ಮಾಡಿದರು. ಇದರಲ್ಲಿ ಕಾಂಗ್ರೆಸ್‌ನ ಓರ್ವ ಸದಸ್ಯರು ಕೂಡ ಕೈ ಎತ್ತಿ ಅಚ್ಚರಿ ಮೂಡಿಸಿದರು.
ಚುನಾವಣೆಯಲ್ಲಿ ಶಾಸಕ ಎಚ್‌ಪಿ ಸ್ವರೂಪ್ ಅವರು ಕೂಡ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ಸಂದರ್ಭದಲ್ಲಿ ಯಾವುದೇ ರೀತಿ ಗೊಂದಲ ಮತ್ತು ಸಮಸ್ಯೆಗೆ ಆಸ್ಪದ ಕೊಡದಂತೆ ಜಾಣ್ಮೆಯಿಂದ ಎಲ್ಲವನ್ನು ನಿಭಾಯಿಸಿದರು. ಆದರೆ ಅಧ್ಯಕ್ಷ ಸ್ಥಾನಕ್ಕೆ ಚಂದ್ರೇಗೌಡ ಮತ್ತು ಗಿರೀಶ್ ಚನ್ನವೀರಪ್ಪ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಚಂದ್ರೇಗೌಡರನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರಿಂದ ಗಿರೀಶ್ ಚನ್ನವೀರಪ್ಪ ಅವರು ನಾಮಪತ್ರ ಹಿಂಪಡೆದುಕೊಂಡರು.
ಚುನಾವಣಾಧಿಕಾರಿಯಾಗಿ ಹಾಸನ ಉಪ ವಿಭಾಗಾಧಿಕಾರಿ ಮಾರುತಿ ಅವರು ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ನರಸಿಂಹಮೂರ್ತಿ ಮತ್ತು ಅಧಿಕಾರಿಗಳು ಹಾಜರಿದ್ದರು.
ಬಿಜೆಪಿಯವರು ನಮ್ಮನ್ನು ಸಂಪರ್ಕಿಸಲಿಲ್ಲ: ಶಾಸಕ ಸ್ವರೂಪ್:
ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಚಂದ್ರೇಗೌಡ ಅವರು ಅಧ್ಯಕ್ಷರಾಗಿ ಮತ್ತು ಬಿಜೆಪಿಯ ಲತಾ ಸುರೇಶ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು.
ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸದಸ್ಯರ ಸಹಕಾರದಿಂದ ನಮ್ಮ ಪಕ್ಷದ ಅಭ್ಯರ್ಥಿ ಚಂದ್ರೇಗೌಡರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಮೈತ್ರಿ ಧರ್ಮ ಪಾಲನೆಯಿಂದ ಬಿಜೆಪಿ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇವೆ. ಚುನಾವಣೆಗೂ ಮುನ್ನ ಬಿಜೆಪಿಯ ಯಾರೊಬ್ಬರೂ ಕೂಡ ನನ್ನನ್ನು ಸಂಪರ್ಕಿಸಿ ಉಪಾಧ್ಯಕ್ಷ ಸ್ಥಾನ ನೀಡುವಂತೆ ಕೇಳಿರಲಿಲ್ಲ. ಆದರೆ ನಾವು ಮೈತ್ರಿ ಧರ್ಮ ಪಾಲನೆಯಿಂದಾಗಿ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಟ್ಟಿದ್ದೇವೆ ಎಂದು ಹೇಳಿದರು.
ಬಿಜೆಪಿಯ ನಾಯಕರು ಸುದ್ದಿಗೋಷ್ಠಿಯಲ್ಲಿ ಮಾತ್ರ ಹೇಳಿದ್ದಾರೆ. ಆದರೆ ವೈಯಕ್ತಿಕವಾಗಿ ಜಿಲ್ಲಾಧ್ಯಕ್ಷರಾಗಲಿ ಅಥವಾ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ನಾವು ಲತಾ ಸುರೇಶ್ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಉಪಾಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.
ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುವೆ: ನೂತನ ಅಧ್ಯಕ್ಷ ಚಂದ್ರೇಗೌಡ:
ನಗರಸಭೆಯ ಎಲ್ಲಾ ಸದಸ್ಯರು, ಶಾಸಕ ಸ್ವರೂಪ್ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ರೇವಣ್ಣ ಅವರ ಸಹಕಾರದಿಂದ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರದಿಂದ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇನೆ ಎಂದು ನೂತನ ಅಧ್ಯಕ್ಷ ಚಂದ್ರೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಚ್ಛತೆ, ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವು ಮತ್ತು ಇನ್ನಿತರೆ ನಗರದ ಮೂಲಭೂತ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುತ್ತೇನೆ. ನನಗೆ ಅಧ್ಯಕ್ಷರಾಗಲು ಸಹಕರಿಸಿದಂತಹ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಎಲ್ಲರಿಗೂ ಧನ್ಯವಾದ ಎಂದ ಉಪಾಧ್ಯಕ್ಷರು:
ಜೆಡಿಎಸ್ ಪಕ್ಷದ ಶಾಸಕರಾದ ಎಚ್.ಪಿ. ಸ್ವರೂಪ್ ಮತ್ತು ಎಚ್.ಡಿ ರೇವಣ್ಣ ಅವರ ಸಹಕಾರದಿಂದ ನಾನು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ಎಲ್ಲರ ಸಹಕಾರ ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ನೂತನ ಉಪಾಧ್ಯಕ್ಷೆ ಲತಾ ಸುರೇಶ್ ತಿಳಿಸಿದರು.