

ಹಾಸನ: ನಮ್ಮ ಜಾಗದಲ್ಲೇ ಶೆಡ್ ನಿರ್ಮಿಸಿಕೊಂಡಿದ್ದರೂ ನಗರಸಭೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತೆರವುಗೊಳಿಸಿದ್ದಾರೆ ಎಂದು ಶೆಡ್‌ನ ಮಾಲೀಕರು ಆರೋಪಿಸಿದ್ದಾರೆ.
ನಗರದ 80 ಫೀಟ್ ರಸ್ತೆಯಲ್ಲಿ 25 ವರ್ಷಗಳ ಹಿಂದೆ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿವೇಶನ ಮಂಜೂರಾಗಿದೆ. ಈ ಜಾಗದಲ್ಲೇ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದು, ಉಳಿದ ಜಾಗದಲ್ಲಿ ಶೆಡ್ ನಿರ್ಮಿಸಲಾಗುತ್ತಿದೆ. ಆದರೆ ಅಧಿಕಾರಿಗಳು ತಪ್ಪು ಮಾಹಿತಿಯಿಂದ ಒತ್ತುವರಿ ಜಾಗವೆಂದು ಪರಿಗಣಿಸಿ ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ ಎಂದು ಮಾಲೀಕರಾದ ಕಮ್ಮರುನಿಸಿಯಾ ಮತ್ತು ಅಂಜುಂ ಅವರು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಾಗ ನಮ್ಮದೇ ಎಂಬುದಕ್ಕೇ ಹಕ್ಕುಪತ್ರ ಸೇರಿ ಎಲ್ಲಾ ದಾಖಲಾತಿಗಳಿವೆ. ನಮಗೆ ಯಾವ ನೋಟಿಸ್ ನೀಡದೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಏಕಾಏಕಿ ತೆರವು ಮಾಡಿದ್ದಾರೆ. ಮನೆಯಲ್ಲಿ ಗರ್ಭಿಣಿ ಒಬ್ಬರೇ ಇದ್ದಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರು.
ಮಗನಿಗೆ ವರ್ಕ್ಶಾಪ್ ಮಾಡಿಕೊಡುವ ಉದ್ದೇಶದಿಂದ ಶೆಡ್ ಹಾಕಲಾಗಿತ್ತು. ಆತ ಅಪಘಾತಕ್ಕೀಡಾಗಿ ಸಕಲೇಶಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ವಿಚಾರಣೆಗಾಗಿ ನಾನು ತೆರಳಿದ್ದಾಗ ನಗರಸಭೆ ಅಧಿಕಾರಿಗಳು ಬಂದಿದ್ದಾರೆ. ಈ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಸಾಕಷ್ಟಿವೆ. ಆದರೆ ಅದೆಲ್ಲವನ್ನೂ ಬಿಟ್ಟು ನಮ್ಮನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾರೆ. ಅಧಿಕಾರಿಗಳು ಬಡವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ವರ್ತನೆ ಖಂಡಿಸಿ ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಹೇಳಿದರು.