ನಗರಸಭೆ ಅಧಿಕಾರಿಗಳ ಕಾರ್ಯಾಚರಣೆ: ಫುಟ್‌ಪಾತ್ ಮೇಲಿನ ಅಂಗಡಿಗಳು ತೆರವು

ನಗರಸಭೆ ಅಧಿಕಾರಿಗಳ ಕಾರ್ಯಾಚರಣೆ: ಫುಟ್‌ಪಾತ್ ಮೇಲಿನ ಅಂಗಡಿಗಳು ತೆರವು
Published on

ಹಾಸನ: ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಜನರ ಓಡಾಟಕ್ಕೆ ತೊಂದರೆಯಾಗಿದ್ದ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.

ನಗರದ ಹಲವೆಡೆ ಪುಟ್‌ಪಾತ್ ಮೇಲೆ ಅಂಗಡಿಗಳನ್ನು ಹಾಕಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ, ಅವುಗಳನ್ನ ತೆರವು ಮಾಡಿದ್ದಾರೆ. ಜತೆಗೆ ಅಂಗಡಿಗಳ ಮಾಲೀಕರಿಗೆ 500 ರೂ. ದಂಡ ಕೂಡ ಹಾಕಿದ್ದಾರೆ. ಮುಂದೆ ಇದೇ ರೀತಿಯ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜನನಿಬಿಡ ಪ್ರದೇಶಗಳಾದ ಎನ್.ಆರ್.ವೃತ್ತ, ಗಾಂಧಿ ಬಜಾರ್, ಸುಬಾಶ್ ವೃತ್ತದ ಸುತ್ತಮುತ್ತ 10 ರಿಂದ 15 ಅಂಗಡಿಗಳ ತೆರವು ಕಾರ್ಯಾಚರಣೆ ಮಾಡಲಾಯಿತು.

ಈ ಬಗ್ಗೆ ಮಾತನಾಡಿದ ನಗರಸಭೆ ಆಯುಕ್ತ ಸತೀಶ್, ಇಂದು ಸುಮಾರು ಹತ್ತರಿಂದ ಹದಿನೈದು ಅಂಗಡಿಗಳು ಪಾದಚಾರಿ ಮಾರ್ಗದಲ್ಲಿ ಸಾಮಾನುಗಳನ್ನು ಹಾಕಿಕೊಂಡು ವ್ಯಾಪಾರ ಮಾಡಲಾಗುತ್ತಿತ್ತು. ಅಂತಹವರಿಗೆ ತಿಳಿವಳಿಕೆ ನೀಡಿ ದಂಡ ವಿಧಿಸಲಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಎಲ್ಲ ಸಾಮಾನುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು. ಬೀದಿ ಬದಿ ಹಾಗೂ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಬಳಸುತ್ತಿದ್ದರೆ ಅಂತಹವರ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲಾಗುವುದು. ಫುಟ್‌ಪಾತ್ ಮೇಲೆ ವ್ಯಾಪಾರ ಮತ್ತು ಪ್ಲಾಸ್ಟಿಕ್ ಕಂಡು ಬಂದರೆ ಪ್ರತಿನಿತ್ಯ ದಾಳಿ ನಡೆಸಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net