

ಚಿಕ್ಕಮಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಹಿನ್ನೆಲೆಯಲ್ಲಿ ನಗರಸಭೆ ಮಹಿಳಾ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ನಗರಸಭೆಯ ಲೆಕ್ಕ ಅಧೀಕ್ಷಕಿ ಲತಾಮಣಿ ಅವರು ತಮ್ಮ ಸೇವಾ ಅವಧಿಯ ಆದಾಯಕ್ಕಿಂತ ಹೆಚ್ಚಾಗಿ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಲತಾಮಣಿ ಅವರಿಗೆ ಸೇರಿದ ಜಯನಗರ ಬಡಾವಣೆಯ ವಾಸದ ಮನೆ, ನಗರಸಭೆ ಕಾರ್ಯಾಲಯ, ಲತಾಮಣಿ ಅವರ ಪತಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರ, ಪತಿ ಹೆಸರಿನಲ್ಲಿ ದೋಣಿಕಣದಲ್ಲಿರುವ ವಾಸದ ಮನೆ, ಮಾವನ ಹೆಸರಿನಲ್ಲಿರುವ ಬೈಪಾಸ್ ರಸ್ತೆಯಲ್ಲಿರುವ ವಾಸದ ಮನೆ ಮೇಲೆಯೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಲತಾ ಮಣಿ ಅವರ ಪತಿ ನಿರ್ಮಿತಿ ಕೇಂದ್ರದ ಅಧಿಕಾರಿಯಾಗಿದ್ದಾರೆ. ದಾಳಿ ವೇಳೆ ಏನೆಲ್ಲ ದಾಖಲೆಗಳು ಪತ್ತೆಯಾಗಿವೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಪಿ.ವಿ.ಸ್ನೇಹ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಲ್ಲಿಕಾರ್ಜುನ್ ನೇತೃತ್ವದ ತಂಡ ದಾಳಿ ನಡೆಸಿದೆ.