ನಗರದೆಲ್ಲೆಡೆ ಸಂಕ್ರಾಂತಿ ಸಡಗರ

15 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವರ್ಷದ ಆರಂಭದ ಹಬ್ಬ ‘ಸಂಕ್ರಾಂತಿ’ಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಸಡಗರ ಸಂಭ್ರಮದಿಂದ ಆಚರಿಸಿದರು.
ಭಾನುವಾರ ಬೆಳಗ್ಗೆಯಿಂದ ಪ್ರಮುಖ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿದ ಜನರು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ಸೋಮೇಶ್ವರ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಸ್ಥಾನ, ಸಾಯಿಬಾಬಾ ಮಂದಿರ, ಉಳವಿ ಚನ್ನಬಸವೇಶ್ವರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿತು.
ಮಧ್ಯಾಹ್ನ ಕುಟುಂಬ ಸಮೇತರಾಗಿ ಉದ್ಯಾನಗಳತ್ತ ತರೆಳಿ ಸಾಮೂಹಿಕ ಭೋಜನ ಸವಿದು ಸಂಭ್ರಮಿಸಿದರು. ಬಗೆ ಬಗೆಯ ಹೋಳಿಗೆ, ಮಾದ್ಲಿ, ಖಡಬು, ಖಡಕ್ ರೊಟ್ಟಿ, ಸಜ್ಜಿ ರೊಟ್ಟಿ, ಶೇಂಗಾ ಚಟ್ನಿ, ಬದನೆಕಾಯಿ, ಹೆಸರು ಕಾಳು ಪಲ್ಲೆ ಸೇರಿ ಇತರ ಖಾದ್ಯಗಳು ಊಟದ ವಿಶೇಷವಾಗಿದ್ದವು.
ಸಾಧನಕೇರಿ, ಕೆ.ಸಿ. ಪಾರ್ಕ್, ಕೆಲಗೇರಿ, ಸೇರಿ ಇತರ ಉದ್ಯಾನ ಹಾಗೂ ನಗರದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಜನರು ಸಹ ಭೋಜನ ಸವಿದರು. ನಂತರ ಪರಸ್ಪರ ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡ ಜನರು ಹಬ್ಬ ಶುಭಾಶಯ ಕೋರಿದರು. ಊಟದ ಬಳಿಕ ಉದ್ಯಾನದಲ್ಲಿ ಮಕ್ಕಳು ಹಾಗೂ ಮಹಿಳೆಯರು ಹಲವು ನೃತ್ಯಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಹಳ್ಳಿಗಳಲ್ಲಿ ಸುಗ್ಗಿ ಸಂಭ್ರಮ: ಹಬ್ಬವನ್ನು ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಲೂಕಿನ ಅಮ್ಮಿನಬಾವಿ, ಕರಡಿಗುಡ್ಡ, ಗರಗ, ತಡಕೋಡ, ಕೋಟೂರು, ಲೋಕೂರ, ಕ್ಯಾರಕೊಪ್ಪ, ಚಿಕ್ಕಮಲ್ಲಿಗವಾಡ, ಜೋಗೆಲ್ಲಾಪುರ, ಇಟ್ಟಿಗಟ್ಟಿ, ಯಾದವಾಡ, ಮರೆವಾಡ, ಸೇರಿದಂತೆ ವಿವಿಧ ಗ್ರಾಮದಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net