ನಗರದಲ್ಲಿ ಹೊಯ್ಸಳ ಸಾಹಿತ್ಯೋತ್ಸವ

ನಗರದಲ್ಲಿ ಹೊಯ್ಸಳ ಸಾಹಿತ್ಯೋತ್ಸವ
Published on

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಆರಂಭವಾದ ಹೊಯ್ಸಳ ಸಾಹಿತ್ಯೋತ್ಸವದ ಮೊದಲ ಗೋಷ್ಠಿ ‘ಕವಿ ಸಮಯ’ದಲ್ಲಿ ಎಂಟು ಕವಿಗಳು ವಾಚಿಸಿದ ಕವಿತೆಗಳು ಸಾಹಿತ್ಯಾಸಕ್ತರ ಗಮನ ಸೆಳೆದವು. ಲಾಕ್‌ಡೌನ್ ಸಂಕಷ್ಟ, ಪರಿಸರ ನಾಶದಿಂದ ಆಗುವ ಹಾನಿ, ಸಾಕು ಪ್ರಾಣಿ ಬಗೆಗಿನ ಕಾಳಜಿ, ತಪ್ಪು ನಡೆಯ ಕುರಿತು ಎಚ್ಚರಿಕೆ ಹೀಗೆ ಒಂದೊಂದು ಕವಿತೆಯೂ ಅರ್ಥಪೂರ್ಣ ವಿಷಯಗಳನ್ನು ಸಭಿಕರಿಗೆ ದಾಟಿಸಿದವು.

ವಿಕ್ರಮ್ ಹತ್ವಾರ್ ವಾಚಿಸಿದ ‘ತಂತಿ ಮೇಲಿನ ನಡಿಗೆ’ ಹಾಗೂ ‘ಗ್ರೀಷ್ಮದ ಖಾಲಿತನ’ ಕವಿತೆಗಳು, ಬದುಕಿನ ಸೂಕ್ಷ್ಮತೆ, ಸಂಕಷ್ಟಗಳನ್ನು ಅನಾವರಣಗೊಳಿಸಿದವು. ನಂದಿನಿ ಹೆದ್ದುರ್ಗ ಅವರ ‘ಒಂದು ಮರ ಕಡಿದು ಉರುಳಿಸಿದ ಮೇಲೆ’ ಎಂಬ ಭಾವಪೂರ್ಣ ಕವನ ಪರಿಸರ ನಾಶದಿಂದ ಏನೆಲ್ಲಾ ನಷ್ಟ, ನಿರಾಸೆಯಾಗಲಿದೆ ಎಂಬುದನ್ನು ಮನದಟ್ಟು ಮಾಡಿತು.

ಪೂರ್ಣಿಮಾ ಸುರೇಶ್ ಅವರ, ‘ಕಳ್ಳಬೆಕ್ಕು’ ಮನುಷ್ಯನ ಆಂತರ್ಯದಲ್ಲಿನ ಕ್ರೌರ್ಯವನ್ನು ಬಿಂಬಿಸಿದರೆ, ರಾಜು ಹೆಗಡೆ ಅವರ ‘ಹಕ್ಕಿಯ ಕುರಿತು’ ಹಾಗೂ ‘ಸೀರೆ ಒಣಗಿಸುವುದು’ ಕವಿತೆಗಳು ವಿಭಿನ್ನ ವಿಷಯಗಳಿಗಾಗಿ ಗಮನ ಸೆಳೆದವು. ಮಮತ ಅರಸೀಕೆರೆ ಅವರು, ‘ಕಾರ್ಯಕಾರಣ ಸಂಬಂಧ’ ಮತ್ತು ‘ಹಿಂಚಲನೆ’ ಕವನಗಳನ್ನು ವಾಚಿಸಿ, ಬದುಕಿನ ಸಂಬಂಧಗಳ ಮಹತ್ವ ತಿಳಿಸಿದರು. ಸ್ಮಿತಾ ಅಮೃತರಾಜ್ ಅವರ ‘ಒಂದು ಖಾಲಿ ಜಾಗ’ ಖಾಲಿ ಜಾಗದ ಮಹತ್ವ ಹೇಳಿದರೆ, ಚಿದಾನಂದ ಸಾಲಿ ಅವರು ವಾಚಿಸಿದ ಎರಡು ಗಝಲ್‌ಗಳು ತಪ್ಪಿನ ಎಚ್ಚರ ಹಾಗೂ ಹೆಣ್ಣಿನ ಮಹತ್ವ ಬಿಂಬಿಸಿದವು.

ಡಾ.ವಿ.ಎ. ಲಕ್ಷ್ಮಣ್ ಅವರ ‘ಡೈರಿಯ ಎರಡು ಹರಿದ ಪುಟಗಳು’ ಮತ್ತು ವಿದ್ಯಾರಶ್ಮಿ ಪೆಲತ್ತಡ್ಕ ಅವರ ‘ಮೂರುತಿ ಮಹಿಮೆ’ ಕವನಗಳು ಚಿಕ್ಕದಾಗಿದ್ದರೂ, ಅರ್ಥಪೂರ್ಣ ಎನಿಸಿ ಸಭಿಕರ ಮೆಚ್ಚುಗೆ ಗಳಿಸಿದವು. ವಿದ್ಯಾರಶ್ಮಿ ಪೆಲ್ಲತ್ತಡ್ಕ ಅವರು ಕವಿಗೋಷ್ಠಿಯ ನಿರ್ವಹಣೆ ಮಾಡಿದರು.

ಕವಿಗಳಾದ ವಿದ್ಯಾರಷ್ಮಿ ಪೆಲ್ಲತ್ತಡ್ಕ, ವಿಕ್ರಮ್ ಹತ್ವಾರ್, ನಂದಿನಿ ಹೆದ್ದುರ್ಗ, ಪೂರ್ಣಿಮಾ ಸುರೇಶ್, ರಾಜು ಹೆಗಡೆ, ಸ್ಮಿತಾ ಅಮೃತರಾಜ್, ಚಿದಾನಂದ ಸಾಲಿ, ಡಾ. ವಿ.ಎ. ಲಕ್ಷ್ಮಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net