

ಹಾಸನ: ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ನಗರದ ಸಾಲಗಾಮೆ ರಸ್ತೆ, ಸರಸ್ವತಿ ದೇವಾಲಯ ವೃತ್ತದ ಬಳಿ ಇರುವ ವಿಷ್ಣುವರ್ಧನ್ ಪ್ರತಿಮೆಗೆ ವಿಷ್ಣು ಸೇನಾ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಯಿಂದ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಅನ್ನದಾನ ಮಾಡುವುದರ ಜತೆಗೆ ಅವರ ನಟನೆಯ ಸಿನಿಮಾದ ಹಾಡುಗಳನ್ನು ಹಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಮಹಂತೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ವಿಷ್ಣು ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಯವರು ಸೇರಿ ಸಾಹಸಸಿಂಹ ವಿಷ್ಣುವರ್ಧನ್ ಅವರ 74ನೇ ವರ್ಷದ ಜನ್ಮದಿನವನ್ನು ಆಚರಿಸಲಾಗುತ್ತಿದೆ. ವಿಷ್ಣು ಅವರು 200 ಚಿತ್ರಗಳಲ್ಲಿ ನಟಿಸಿದ್ದು, ಅವರ ಕೊಡುಗೆ ಅಪಾರವಿದೆ. ಕರ್ನಾಟಕದಲ್ಲಿ ಡಾ. ರಾಜಕುಮಾರ್ ಅವರು ಬಿಟ್ಟರೇ ವಿಷ್ಣುವರ್ಧನ್ ಅವರು ಹೆಚ್ಚು ಚಲನಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ ಎಂದರು.
ವಿಷ್ಣುವರ್ಧನ್ ಕುರಿತು ಹಾಸನಾಂಬ ಕಲಾಕ್ಷೇತ್ರದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಎಲ್ಲಾ ಅಭಿಮಾನಿಗಳು ಬಂದು ಸಹಕರಿಸುವಂತೆ ಮನವಿ ಮಾಡಿದರು. ಈ ದಿನ ಕರ್ನಾಟಕ ರಾಜ್ಯಾದ್ಯಾಂತ ವಿಷ್ಣು ಸೇನಾ ಸಮಿತಿ ಅದ್ಧೂರಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಷ್ಣುವರ್ಧನ್ ಅವರ ಸೇವೆ ಗುರುತಿಸುವಲ್ಲಿ ವಿಫಲವಾಗಿದೆ. ಇವತ್ತಿನವರೆಗೂ ವಿಷ್ಣು ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೊಡದಿರುವುದು ಒಂದು ದುರದೃಷ್ಟಕರ ಸಂಗತಿ. ಕರ್ನಾಟಕ ಸರ್ಕಾರಕ್ಕೆ ವಿಷ್ಣು ಮೇಲೆ ಅಭಿಮಾನ ಇದ್ದರೇ ಈ ವೃತ್ತಕ್ಕೆ ಇಲ್ಲವೇ ಯಾವುದಾದರೂ ಒಂದು ರಸ್ತೆಗೆ ಅವರ ಹೆಸರನ್ನು ಇಡುವಂತೆ ಮನವಿ ಮಾಡಿದರು.
ಇದೆ ವೇಳೆ ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಕಲಾವಿದರ ಸಂಘದ ಅಧ್ಯಕ್ಷ ಕುಮಾರ್ ಅವರು ವಿಷ್ಣುವರ್ಧನ್ ನಟಿಸಿದ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಸಾರ್ವಜನಿಕರ ಗಮನಸೆಳೆದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಯಲಗುಂದ ಶಾಂತಕುಮಾರ್, ಸಮಾಜ ಸೇವಕರಾದ ವಿಜಯಕುಮಾರ್, ತಮ್ಲಾಪುರ ಗಣೇಶ್, ಅಶ್ರು, ಗಾಯಕಿ ಅಂಜಲಿ, ನೀತು, ಅನ್ನಪೂರ್ಣಾ, ರಘು ವೆಂಕಟೇಶ್, ಪ್ರಕಾಶ್, ಮಂಜುಳಾ, ಸಾವಿತ್ರಮ್ಮ, ಮಮತಾ, ಸಾವಿತ್ರಮ್ಮ ಇತರರು ಉಪಸ್ಥಿತರಿದ್ದರು.