

ಹಾಸನ: ನಗರದ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘ ಮತ್ತು ಜಿಲ್ಲಾ ನೇಕಾರ ಸಮುದಾಯಗಳ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶನಿವಾರ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಕ್ರೀಡಾ ಚಟುವಟಿಕೆಗಳು ಯಶಸ್ವಿಯಾಗಿ ಜರುಗಿದವು.
ಈ ವೇಳೆ ಮಾತನಾಡಿದ ಮಹಿಳಾ ಸಂಘದ ಅಧ್ಯಕ್ಷೆ ಪೇಮಮ್ಮ, ಪ್ರತಿ ವರ್ಷ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ಶ್ರೀ ಸತ್ಯನಾರಾಯಣ ಪ್ರಜೆ ಮತ್ತು ಕ್ರೀಡಾ ಚಟುವಟಿಕೆಗಳು, ವಾರ್ಷಿಕೋತ್ಸವ ಸಮಾರಂಭ, ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಸಾಮೂಹಿಕವಾಗಿ ಸತ್ಯನಾರಾಯಣ ಪೂಜೆ ನಡೆಸಲಾಗಿದೆ ಎಂದರು.
ಇಡೀ ಜನತೆಗೆ ಒಳಿತು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ಮಕ್ಕಳಿಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು. ಭಾನುವಾರ ಬೆಳಿಗ್ಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಉದ್ಘಾಟನೆಯನ್ನು ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ನೆರವೇರಿಸಲಿದ್ದಾರೆ. ಕುರುಹಿನ ಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಕಾಮಮೂರ್ತಿ ಅಂಬಾದಾಸ್, ಅಖಿಲ ಭಾರತ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷೆ ಡಾ.ಜಯಲಕ್ಷ್ಮಿ, ಮಾಜಿ ಅಧ್ಯಕ್ಷೆ ದೇವಿಕಾ ಭೂಷಣ್, ನೇಕಾರರ ಸಮುದಾಯಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಾಗವೇಣಿ ಇತರರು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಉದ್ಘಾಟನೆಯನ್ನು ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್ ನೆರವೇರಿಸುವರು. ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟದ ಅಧ್ಯಕ್ಷ ಸೋಮೇಶೇಖರ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಉಮಾ ಜಗದೀಶ್, ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳ ಹೋರಾಟಗಾರ್ತಿ ಡಾ.ಅಕೈ ಪದ್ಮಸಾಲಿ ಭಾಗವಹಿಸುವರು ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಶೃತಿ, ಉಪಾಧ್ಯಕ್ಷೆ ರುಕ್ಮಿಣಿ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಸುನೀತ ಮನೋಜ್ ಕುಮಾರ್, ಸ್ವ-ಸಹಾಯ ಸಂಘದ ಅಧ್ಯಕ್ಷೆ ನಮಿತ ಪ್ರಸಾದ್, ಕಾರ್ಯದರ್ಶಿ ಕೆ.ಎಚ್. ಪ್ರೇಮ, ಸಹ ಕಾರ್ಯದರ್ಶಿ ತ್ರಿವೇಣಿ, ಖಜಾಂಚಿ ಇಂದ್ರ ಮಂಜುನಾಥ್, ವೀಣಾ, ಕುಮಾರಿ, ತುಳಸಿ, ಜಯಮ್ಮ ಇತರರಿದ್ದರು.