

ಬಳ್ಳಾರಿ : ನಗರ ದಿನೇದಿನೇ ಬೆಳೆಯುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಸಂಸದ ನಾಸೀರ್ ಹುಸೇನ ಹೇಳಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ನಗರದ್ಯಾಂತ ಎಷ್ಟು ಶೌಚಾಲಯಗಳು ನಿರ್ಮಾಣ ಮಾಡಬೇಕು ಎಂದು ಸರ್ವೆ ಮಾಡಿ ಮಾಹಿತಿ ನೀಡಿ. ಜಿಂದಾಲ್‌ನ ಸಿಎಸ್‌ಆರ್ ನಿಧಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು ಭರವಸೆ ನೀಡಿದರು. ಬಿಡಾಡಿ ದನ, ಚಿತೆಗಾರ ನಿರ್ಮಾಣ, ಅನಧಿಕೃತ ಬ್ಯಾನರ್ ಅಳವಡಿಕೆ ಮಾಡುವವರ ಮೇಲೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯ ವಿಷಯಗಳ ಗಂಭೀರ ಚರ್ಚೆ ಇಲ್ಲ : ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಗರದಲ್ಲಿನ ಚರ್ಚೆಯಾಗಬೇಕಿದ್ದ ಮುಖ್ಯ ಸಮಸ್ಯೆಗಳು ಬಿಟ್ಟು ಉಳಿದ ಹಲವು ವಿಷಯಗಳು ಚರ್ಚೆಯಾಗಿದ್ದು ಕಂಡು ಬಂತು. ಅಲ್ಲದೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ನಗರದಲ್ಲಿನ ನಿತ್ಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡುವ ವೇಳೆ ಪಾಲಿಕೆಯ ಕೆಲ ಅಧಿಕಾರಿಗಳ ಮೇಲೆ ಅಕ್ರೋಶಗೊಂಡರು. ನಗರದಲ್ಲಿ ಒಳಚರಂಡಿ ವ್ಯವಸ್ಥೆ , ಸಮರ್ಪಕ ಕುಡಿಯುವ ನೀರು, ಸ್ವಚ್ಛತೆ, ರಸ್ತೆಗಳ ದುರಸ್ತಿಯಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದು, ಅವುಗಳ ಬಗ್ಗೆ ಗಂಭೀರವಾಗಿ ಚರ್ಚೆಯಾಗಬೇಕಿದ್ದ ವಿಷಯಗಳನ್ನು ಬಿಟ್ಟು ಕೆಲ ಸಾಮಾನ್ಯ ವಿಷಯಗಳ ಮೇಲೆ ಚರ್ಚೆ ನಡೆದವು. ಹಲವು ತಿಂಗಳಿನಿಂದ ನಡೆಯುತ್ತಿದ್ದ ಒಂದು ಕಾಮಗಾರಿ ಪೂರ್ಣಗೊಂಡಿದೆಯೇ ಎಂಬ ಪಾಲಿಕೆ ಸದಸ್ಯರ ಪ್ರಶ್ನೆಗೆ ಅಧಿಕಾರಿಗಳ ಹತ್ತಿರ ಉತ್ತರವೇ ಇಲ್ಲ. ಕೆಲ ಅಧಿಕಾರಿಗಳು ಈ ಸಭೆಗೂ ನಮಗೂ ಸಂಬಂಧವಿಲ್ಲ ಎಂಬಂತೆ ಮೊಬೈಲ್ ವೀಕ್ಷಿಸುತ್ತ ಕುಳಿತ್ತಿದ್ದರು. ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪಾಲಿಕೆ ಅಧಿಕಾರಿ ವಿಷಯದ ನಡಾವಳಿ ಪ್ರಸ್ತುತ ಪಡಿಸದ ವೇಳೆ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಪ್ರತಿಯೊಂದು ವಿಷಯಕ್ಕೂ ಎದ್ದು ನಿಂತು ಮೇಯರ್ ಹಾಗೂ ಅಧಿಕಾರಿಗಳನ್ನು ಪ್ರಶ್ನೆ ಕೇಳುವುದು ಸಾಮಾನ್ಯವಾಗಿತ್ತು. ಅದಕ್ಕೆ ಆಡಳಿತ ಪಕ್ಷದ ಪೇರಂ ವಿವೇಕ್ ವಿರೋಧ ಪಕ್ಷದ ನಾಯಕನ ಪ್ರಶ್ನೆಗೆ ಧ್ವನಿಗೂಡಿಸುತ್ತಿದ್ದರು. ಸಭೆಯ ಮಧ್ಯೆ ಮಧ್ಯೆದಲ್ಲಿ ಮೇಯರ್ ನಂದೀಶ್ ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರಿಸಲಾಗುವುದು ಎಂಬ ಭರವಸೆ ಮಾತುಗಳು. ಅಲ್ಲದೆ, ಪಾಲಿಕೆ ಕಮಿಷನರ್ ಪ್ರತಿಯೊಂದು ಪ್ರಶ್ನೆಗಳಿಗೂ ಸರ್ಕಾರದ ನಿಯಮದಂತೆ ಕಾರ್ಯ ನಿರ್ವಹಿಸುತ್ತಿವೆ ಎಂಬ ಉತ್ತರ ಕೇಳಿ ಬಂತು.
ಶಿಷ್ಟಚಾರ ಉಲ್ಲಂಘನೆ : ಪಾಲಿಕೆ ಸಾಮಾನ್ಯ ಸಭೆ ನಡೆಯುವ ವೇಳೆ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯಡು ತಮ್ಮ ವಾರ್ಡ್ ಸಮಸ್ಯೆ ಪ್ರಸ್ತಾಪಿಸುವಾಗ ಅವರ ಪತಿ ಎದ್ದು ಅಧಿಕಾರಿಗಳನ್ನು ಪ್ರಶ್ನಿಸಲು ಮುಂದಾದರು. ಸಭೆಯಲ್ಲಿದ್ದ ಮೇಯರ್, ಕಮಿಷನರ್ ಹಾಗೂ ನಗರ ಶಾಸಕರು ಯಾರು ಕೂಡ ವಿರೋಧ ವ್ಯಕ್ತಪಡಿಸಿಲಿಲ್ಲ. ಅಲ್ಲದೆ, ಈಗಾಗಲೇ ಎರಡು ಬಾರಿ ಮುಂದೂಡಿದ್ದ ಸಭೆಯನ್ನು ನಿಗದಿ ಸಮಯಕ್ಕೆ ಆರಂಭಿಸಿದ ಒಂದೂವರೆ ಗಂಟೆ ತಡವಾಗಿ ಪ್ರಾರಂಭಿಸಲಾಯಿತು.