

ಕಲಬುರಗಿ: ನಗರದಲ್ಲಿ ಶನಿವಾರ ಮತ್ತೊಂದು ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 11ಕ್ಕೇರಿದೆ. ಮೂರು ದಿನ ಹಿಂದೆ ಮೃತಪಟ್ಟಿದ್ದ ವೃದ್ಧ ಹಣ್ಣಿನ ವ್ಯಾಪಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ 38 ವರ್ಷದ ಮಹಿಳಾ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತೊಂದು ಕೇಸ್ ಪತ್ತೆಯಾಗಿದ್ದನ್ನು ಶನಿವಾರ ಅಧಿಕೃತವಾಗಿ ಪ್ರಕಟಿಸಿದರು. ವೃದ್ಧನಿಗೆ ಚಿಕಿತ್ಸೆ ನೀಡಿದ ನಂತರ ಹೋಂ ಕ್ವಾರಂಟೈನ್ನಲ್ಲಿದ್ದ ಈಕೆಯನ್ನು ಪರೀಕ್ಷೆ ಮಾಡಿದಾಗ ಕರೊನಾ ಸೋಂಕು ದೃಢಪಟ್ಟಿತು. ಈಗಾಗಲೇ ಆಸ್ಪತ್ರೆಯನ್ನು ವಶಕ್ಕೆ ಪಡೆದಿರುವ ಜಿಲ್ಲಾಡಳಿತ, ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಸೋಂಕಿತೆಯನ್ನು ಇಎಸ್ಐ ಆಸ್ಪತ್ರೆ ಐಸೋಲೇಷನ್ ವಾಡರ್್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
673 ಜನರು 28 ದಿನ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. 295 ಜನ 14 ದಿನ ಹೋಂ ಕ್ವಾರಂಟೈನ್ ಅವಧಿ ಮುಗಿಸಿದ್ದು, ಇನ್ನೂ 14 ದಿನ ವಿಸ್ತರಿಸುವಂತೆ ಸೂಚನೆ ನೀಡಲಾಗಿದೆ. 487 ಜನರ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಲಾಗಿದೆ. ಈಗ 627 ಜನ ಗೃಹ ನಿರ್ಬಂಧದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಎರಡು ಸಾವು ಸಂಭವಿಸಿದ್ದು, ಇಬ್ಬರು ಗುಣಮುಖರಾಗಿದ್ದಾರೆ.
ಇದುವರೆಗೆ ಬೆಂಗಳೂರಿನ 28,323 ಜನ ಸೇರಿ ಹೈದರಾಬಾದ್ ಮತ್ತು ವಿದೇಶಗಳಿಂದ ಕಲಬುರಗಿ ಜಿಲ್ಲೆಗೆ 31,518 ಜನರು ಬಂದಿದ್ದು, ಇವರ ಮೇಲೆ ನಿಗಾ ಇಡಲಾಗಿದೆ.
ಕೈ ಮುಗಿದು ಮನವಿ
ಕರೊನಾ ಅತ್ಯಂತ ಮಾರಕವಾಗಿದ್ದರಿಂದ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಸೋಂಕು ನಿಮರ್ೂಲನೆ ಆಗಬೇಕೆಂದರೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಇರಬೇಕು. ಕಲಬುರಗಿ ಜಿಲ್ಲೆ ಜನತೆಗೆ ಕೈ ಮುಗಿದು ಕೇಳುತ್ತೇನೆ. ಯಾರೂ ಮನೆ ಬಿಟ್ಟು ಹೊರಬರಬೇಡಿ. ಬಂದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಡಿಸಿಎಂ ಕಾರಜೋಳ ಎಚ್ಚರಿಸಿದರು. ನಿಜಾಮುದ್ದೀನ್ ತಬ್ಲಿಘಿ ಸಭೆಗೆ ಹೋಗಿ ಬಂದವರು ಜಿಲ್ಲೆಯಲ್ಲಿ ಇದ್ದರೆ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಿ. ಈಗಾಗಲೇ ಕೆಲವರು ಬಂದಿದ್ದು, ಕೆಲವರು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಇವರನ್ನು ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು.
ವಸತಿ ಶಾಲೆಗಳಲ್ಲಿ 4963 ಕ್ವಾರಂಟೈನ್
ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆ ಮತ್ತು ಹಾಸ್ಟೆಲ್ಗಳಲ್ಲಿ ಕರೊನಾ ಶಂಕಿತರು ಸೇರಿ 6093 ಜನರಿಗೆ ವಸತಿ ಮತ್ತು ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. 4963 ಶಂಕಿತರಿಗೆ ಕ್ವಾರಂಟೈನ್ ಮಾಡಿ ಆರೈಕೆ ಮಾಡಲಾಗುತ್ತಿದೆ. ವಲಸೆ ಬಂದಿರುವ 1130 ಕಾಮರ್ಿಕರಿಗೆ ವಸತಿ ಕಲ್ಪಿಸಿ ಉಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.