ನಗರದಲ್ಲಿ ಬಾರಿ ಮಳೆ ಶ್ರೀನಗರ ಬಡವಾಣೆಯಲ್ಲಿ ಮನೆಗಳು ಕುಸಿತ

ನಗರದಲ್ಲಿ ಬಾರಿ ಮಳೆ ಶ್ರೀನಗರ ಬಡವಾಣೆಯಲ್ಲಿ ಮನೆಗಳು ಕುಸಿತ
Published on

ಹಾಸನ: ಕಳೆದ ಒಂದುವಾರದಿಂದಲೂ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಶ್ರೀನಗರ ಬಡವಾಣೆಯಲ್ಲಿ 4 ಮನೆಗಳು ಕುಸಿದು ಅಪಾರ ನಷ್ಟ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿ ವಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ನಗರದ ಜಿಲ್ಲಾ ಉಪ ಕಾರಾಗೃಹ ಹಿಂಭಾಗದ ಶ್ರೀನಗರದಲ್ಲಿ ಮುನೀರ್, ರುಕ್ಕಯ್ಯ, ನಾಜೀರ್ ಬಾನು ಸೇರಿದಂತೆ ಹಲವಾರು ಮನೆಗಳು ಹೆಚ್ಚಿನ ಮಳೆಗೆ ಮನೆ ಕುಸಿದಿವೆ. ಇವರು ಕಳೆದ 30 ವರ್ಷಗಳಿಂದಲೂ ವಾಸವಾಗಿದ್ದು, ಹೆಂಚಿನ ಮನೆಗಳಾಗಿವೆ. ಈ ಭಾಗದಲ್ಲಿ ಬಹುತೇಕ ಹಳೆಯ ಕಾಲದ ಹೆಂಚಿನ ಮನೆಗಳು ಇರುವುದರಿಂದ ಇಂತಹ ಮಳೆಗೆ ಒಂದೊಂದಾಗಿ ಮನೆಗಳು ಧರೆಗೆ ಉರುಳಿ ಬೀಳುತ್ತಿವೆೆ. ಕೂಡಲೇ
ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಇಲ್ಲವಾದರೆ ಮನೆಗಳು ಕುಸಿದು ಅನಾಹುತ ಆಗುವ ಸಂಭವ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಶ್ರೀನಗರ ನಿವಾಸಿ ಮುನೀರ್, ಊಟ ಮಾಡುವಾಗ ಶಬ್ದ ಬಂತು, ಹೋಗಿ ನೋಡಿದಾಗ ಎರಡು ಗೋಡೆ ಕುಸಿದಿದ್ದವು. ಭಯದಿಂದ ಎಲ್ಲರೂ ಮನೆಯಿಂದ ಹೊರ ಬಂದೆವು, ಅದೃಷ್ಟವಶಾತ್ ಯಾವುದೇ ತೊಂದರೆ ಆಗಲಿಲ್ಲ ಎಂದರು. ಘಟನೆ ನಂತರ ನಗರಸಭೆ ಅಧಿಕಾರಿಗಳು ಹಾಗೂ ಸದಸ್ಯರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ ಎಂದರು.
ಮನೆ ಬಿದ್ದು ಒಳಗಿದ್ದ ವಸ್ತು ಹಾನಿಯಾಗಿವೆ. ಇದರಿಂದ 4-5 ಲಕ್ಷ ರೂ. ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟವರು ನಮ್ಮ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಸಮಾಜ ಸೇವಕ ದಸ್ತಗೀರ್ ಮಾತನಾಡಿ, ಶ್ರೀನಗರದಲ್ಲಿ ಇನ್ನೂ ಹಲವು ಮನೆ ಬಿರುಕು ಬಿಟ್ಟಿವೆ. ತಹಸೀಲ್ದಾರ್ ಹಾಗೂ ನಗರಸಭೆಯವರು ಬಂದು ಮಹಜರ್ ಮಾಡಿದ್ದಾರೆ. ಶಾಸಕರು ಹಾಲಿ ವಿಧಾನಸಭೆ ಅಧಿವೇಶನದಲ್ಲಿದ್ದು, ಆಪ್ತ ಸಹಾಯಕರನ್ನು ಸ್ಥಳಕ್ಕೆ ಕಳಿಸಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯಿಂದ 30 ರಿಂದ 40 ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿವೆೆ. ಈ ಭಾಗದಲ್ಲಿ ತುಂಬಾ ಬಡ ಕೂಲಿ ಕಾರ್ಮಿಕರು ವಾಸವಾಗಿದ್ದು, ಕಳೆದ 30 ವರ್ಷಗಳಿಂದಲೂ ಇಲ್ಲೇ ಇದ್ದಾರೆ. ಇವರ ಸಂಕಷ್ಟಕ್ಕೆ ಸಂಬಂಧಪಟ್ಟವರು ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಶಬ್ಬೀರ್, ಮಹಮದ್ ಪೀರ್ ಸೇರಿ ಸ್ಥಳೀಯ ನಿವಾಸಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net