

ಚಾಮರಾಜನಗರ: ನಗರದಲ್ಲಿ ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದಿದ್ದ ಘರ್ಷಣೆ ಪ್ರಕರಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಭಾನುವಾರ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದರು.
ನಗರದ ಸಂತೇಮರಹಳ್ಳಿ ವೃತ್ತದ ಬಳಿ ವೀಲಿಂಗ್ ಮಾಡುತ್ತಿದ್ದ ಯುವಕ ಹಾಗೂ ಮತ್ತೊಂದು ಕೋಮಿನ ಯುವಕರ ನಡುವೆ ಜಗಳ ಶುರುವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ರಾತ್ರಿಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಿದ್ದರು.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭಾನುವಾರ ನಗರದ ಪಟ್ಟಣ ಪೊಲೀಸ್ ಠಾಣೆ ಮುಂಭಾಗದಿಂದ ಹೊರಟ ಪೊಲೀಸ್ ಪಥ ಸಂಚಲನ ಸುಲ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವೃತ್ತ, ಮೇಗಲನಾಯಕರ ಬೀದಿ, ದೊಡ್ಡ ಅಂಗಡಿ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಷನ್ ರಸ್ತೆ, ಜೈ ಭುವನೇಶ್ವರಿ ವೃತ್ತ, ರಥದ ಬೀದಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ ಮೂಲಕ ಸಾಗಿ ಪ್ರವಾಸಿ ಮಂದಿರ ಬಳಿ ಅಂತ್ಯಗೊಂಡಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಪೊಲೀಸರು ಎರಡು ಕೋಮಿನ ಮುಖಂಡರನ್ನು ಕರೆಸಿ ಸಮಾಧಾನ ಮಾಡಿದ್ದಾರೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಡಿಆರ್ ಡಿವೈಎಸ್ಪಿ ಸೋಮಣ್ಣ, 10 ಇನ್ಸ್‌ಪೆಕ್ಟರ್, 15 ಸಬ್ ಇನ್ಸ್‌ಪೆಕ್ಟರ್, 2 ಕೆಎಸ್‌ಆರ್‌ಪಿ ತುಕಡಿ, 2 ಡಿಆರ್ ತುಕಡಿ ಸೇರಿದಂತೆ 250 ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.